ನವದೆಹಲಿ: ಕೋವಿಡ್ ಎರಡನೇ ಅಲೆಯ ಸಂದರ್ಭ ಉಂಟಾದ ಸಮಸ್ಯೆಗಳನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ₹ 23,000 ಕೋಟಿ ಪ್ಯಾಕೇಜ್ ನೀಡಲಾಗುವುದು ಎಂದು ನೂತನ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಈ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬಳಕೆ ಮಾಡುತ್ತವೆ. ₹ 23,000ಕೋಟಿಯಲ್ಲಿ ಸುಮಾರು ₹ 15,000 ಕೋಟಿಯನ್ನು ಕೇಂದ್ರದಿಂದ ಬಳಕೆ ಮಾಡಲಾಗುವುದು ಮತ್ತು ₹ 8,000 ಕೋಟಿಯನ್ನು ರಾಜ್ಯಗಳು ವಿನಿಯೋಗಿಸಲಿವೆ ಎಂದು ಅವರು ಹೇಳಿದರು.
ಮುಂದಿನ ಒಂಬತ್ತು ತಿಂಗಳ ಅವಧಿಯ ಕಾರ್ಯ ತಂತ್ರ ಪ್ರಕಟಿಸಿದ ಅವರು, ಈ ಅವಧಿಯಲ್ಲಿ ನಾವು ಒಟ್ಟಾಗಿ ಕೋವಿಡ್ ವಿರುದ್ಧ ಹೋರಾಡಬೇಕಾಗಿದೆ. ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡುವುದು ನಮ್ಮ ಕೆಲಸವಾಗಿದೆ ಎಂದು ಮಾಂಡವಿಯಾ ತಿಳಿಸಿದರು.
ಇದೇವೇಳೆ, ಕೋವಿಡ್ ಮೂರನೆ ಅಲೆ ಎದುರಿಸಲು ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ತೆರೆಯಲಾಗುವುದು. ಕೋವಿಡ್ ಪರಿಹಾರ ನಿಧಿಯಡಿ 20,000 ಐಸಿಯು ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.