ADVERTISEMENT

ಜಮ್ಮು ಕಾಶ್ಮೀರ: 10,000 ಸೇನಾ ಸಿಬ್ಬಂದಿ ಹಿಂತೆಗೆತ

ಕಣಿಯವೆ ಪರಿಸ್ಥಿತಿ ಅವಲೋಕಿಸಿ ಕೇಂದ್ರ ಗೃಹಸಚಿವಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 7:47 IST
Last Updated 20 ಆಗಸ್ಟ್ 2020, 7:47 IST
ಶ್ರೀನಗರದಲ್ಲಿ ಭದ್ರತಾಪಡೆಗಳ ಕಾವಲು–ಪಿಟಿಐ ಚಿತ್ರ
ಶ್ರೀನಗರದಲ್ಲಿ ಭದ್ರತಾಪಡೆಗಳ ಕಾವಲು–ಪಿಟಿಐ ಚಿತ್ರ   

ಶ್ರೀನಗರ: ಕಳೆದೊಂದು ವರ್ಷದಿಂದ ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಭದ್ರತಾಪಡೆಯ 10,000ಕ್ಕೂ ಹೆಚ್ಚು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಣಿವೆಯ ಪರಿಸ್ಥಿತಿಯನ್ನು ಅವಲೋಕಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರದ 370ನೇ ವಿಧಿ ತೆಗೆದುಹಾಕುವ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 40 ಸಾವಿರ ಸೈನಿಕರನ್ನು ಕಣಿವೆಯಲ್ಲಿ ಸರ್ಕಾರ ನಿಯೋಜಿಸಿತ್ತು.ಆಗಸ್ಟ್ 4ರಂದು ರಾಜ್ಯದಲ್ಲಿ ಲಾಕ್‌ಡೌನ್ ಜಾರಿಗೆ ಬಂದಿತ್ತು. ಬಹುತೇಕ ರಾಜಕೀಯ ನಾಯಕರನ್ನು ಸರ್ಕಾರ ವಶಕ್ಕೆ ಪಡೆದಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆಯನ್ನು ಕೇಂದ್ರ ಗೃಹಸಚಿವಾಲಯ ಪರಿಷ್ಕರಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತ, ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕಳುಹಿಸಲಾಗಿದೆ.

ADVERTISEMENT

ತಕ್ಷಣದಿಂದ ಜಾರಿಗೆ ಬರುವಂತೆ 100 ಕಂಪನಿಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಪ್ರತಿ ಕಂಪನಿಯಲ್ಲಿ 100ರಿಂದ 120 ಸೈನಿಕರು ಇರುತ್ತಾರೆ. ಸಿಆರ್‌ಪಿಎಫ್‌ನ 40, ಬಿಎಸ್‌ಎಫ್, ಎಸ್‌ಎಸ್‌ಬಿ ಹಾಗೂ ಐಟಿಬಿಪಿಯ ತಲಾ 20 ಕಂಪನಿಗಳನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ.

300 ಹೆಚ್ಚುವರಿ ಕಂಪನಿಗಳು ಕಾಶ್ಮೀರದಲ್ಲೇ ಉಳಿಯಲಿವೆ ಎಂದು ಮೂಲಗಳು ತಿಳಿಸಿವೆ. ಅವುಗಳನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಮುಂದಿನ ತಿಂಗಳು ನಡೆಯುವ ಸಚಿವಾಲಯದ ಪರಿಶೀಲನಾ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.