ADVERTISEMENT

ಭೂಸೇನೆಗೆ ಮಹಿಳಾ ಬಲ: ಪೂರ್ಣಾವಧಿ ನೇಮಕಕ್ಕೆ ರಕ್ಷಣಾ ಸಚಿವಾಲಯದ ಆದೇಶ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 18:17 IST
Last Updated 23 ಜುಲೈ 2020, 18:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಸೇನೆಯಲ್ಲಿ ಮಹಿಳೆಯರ ಪೂರ್ಣಾವಧಿ ನೇಮಕಕ್ಕೆ (ಪರ್ಮನೆಂಟ್‌ ಕಮಿಷನ್‌) ರಕ್ಷಣಾ ಸಚಿವಾಲಯವು ಅಧಿಕೃತ ಅನುಮೋದನೆ ನೀಡಿದೆ. ಅಲ್ಪಾವಧಿ ಸೇವಾ ನೇಮಕದ ಮೂಲಕ ಸೇನೆಗೆ ಸೇರಿದ ಮಹಿಳೆಯರ ದೀರ್ಘ ಕಾನೂನು ಹೋರಾಟಕ್ಕೆ ಈ ಮೂಲಕ ಗೆಲುವು ದೊರೆತಿದೆ.

ಮುನ್ನೆಲೆ ಹೋರಾಟಕ್ಕೆ ಬೆಂಬಲ ಒದಗಿಸುವ ಎಂಟು ಸೇವೆಗಳಲ್ಲಿ ಮಹಿಳೆಯರ ಪೂರ್ಣಾವಧಿ ನೇಮಕಕ್ಕೆ ಈಗ ಅವಕಾಶ ದೊರೆತಿದೆ. ಭೂಸೇನೆಯ ವಾಯು ರಕ್ಷಣಾ ವಿಭಾಗ, ಸಿಗ್ನಲ್‌, ಎಂಜಿನಿಯರಿಂಗ್‌, ಭೂಸೇನೆಯ ವಾಯುಯಾನ, ಎಲೆಕ್ಟ್ರಾನಿಕ್ಸ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಭೂಸೇನಾ ಸೇವಾ ಕೋರ್‌, ಭೂಸೇನಾ ಆರ್ಡೆನ್ಸ್‌ ಕೋರ್‌ ಮತ್ತು ಗುಪ್ತಚರ ಕೋರ್‌ನಲ್ಲಿ ಮಹಿಳೆಯರಿಗೆ ಈಗ ಅವಕಾಶಗಳು ತೆರೆದುಕೊಂಡಿವೆ.

ನ್ಯಾಯಾಧೀಶರು ಮತ್ತು ಅಡ್ವೊಕೋಟ್‌ ಜನರಲ್‌ ಹಾಗೂ ಭೂಸೇನಾ ಶಿಕ್ಷಣ ಕೋರ್‌ನಲ್ಲಿ ಮಹಿಳೆಯರ ಪೂರ್ಣಾವಧಿ ಸೇವೆಗೆ 2008ರಿಂದಲೇ ಅವಕಾಶ ಇತ್ತು.

ADVERTISEMENT

ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಪೂರ್ಣಾವಧಿ ಕರ್ತವ್ಯದ ಅವಕಾಶ ನೀಡುವ ಸರ್ಕಾರದ ಆದೇಶಪ‍ತ್ರವನ್ನು ರಕ್ಷಣಾ ಸಚಿವಾಲಯವು ಪ್ರಕಟಿಸಿದೆ. ಈ ಮೂಲಕ, ಮಹಿಳೆಯರು ಭೂಸೇನೆಯಲ್ಲಿ ಮಹತ್ವದ ಹೊಣೆಗಾರಿಕೆಗೆ ಹೆಗಲು ಕೊಡಲು ಅವಕಾಶ ಸೃಷ್ಟಿಯಾಗಿದೆ. ಅಲ್ಪಾವಧಿ ಸೇವೆಗೆ ನೇಮಕವಾಗಿರುವ ಮಹಿಳೆಯರಿಗೆ ಭಾರತೀಯ ಭೂಸೇನೆಯ ಹತ್ತು
ಕ್ಷೇತ್ರಗಳಲ್ಲಿ ಪೂರ್ಣಾವಧಿ ಕರ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಆರ್ಮರ್ಡ್‌ ಕೋರ್‌, ಪದಾತಿ ದಳ, ಫಿರಂಗಿ ದಳ ಮತ್ತು ಮೆಕನೈಸ್ಡ್‌ ಪದಾತಿದಳದಲ್ಲಿ ಮಹಿಳೆಯರಿಗೆ ಅವಕಾಶ ಇಲ್ಲ.

1992ರಲ್ಲಿ ಭೂ ಸೇನೆಗೆ ಮಹಿಳೆಯರ ಸೇರ್ಪಡೆ ಆರಂಭಿಸಲಾಯಿತು. ನ್ಯಾಯಾಧೀಶರು ಮತ್ತು ಅಡ್ವೊಕೇಟ್‌ ಜನರಲ್‌ ಹಾಗೂ ಶಿಕ್ಷಣ ಕೋರ್‌ಗಳಲ್ಲಿ ಮಹಿಳೆಯರಿಗೆ 2008ರಿಂದ ಸಮಾನ ಅವಕಾಶ ದೊರಕಿತು. ಅಲ್ಪಾವಧಿ ಕರ್ತವ್ಯದ ಮೂಲಕವೇ ಮಹಿಳೆಯರ ನೇಮಕ ಆಗುತ್ತಿತ್ತು. ಮೊದಲಿಗೆ ಇದು 5 ವರ್ಷ ಇತ್ತು. ಬಳಿಕ ಅದನ್ನು 14 ವರ್ಷಕ್ಕೆ ಏರಿಸಲಾಗಿದೆ.

ಕಾನೂನು ಹೋರಾಟ: ದೆಹಲಿ ಹೈಕೋರ್ಟ್‌ ತೀರ್ಪಿನ ಮೂಲಕ 2010ರಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭವಾಯಿತು. ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಈ ಫೆಬ್ರುವರಿಯಲ್ಲಿ ತೀರ್ಪು ನೀಡಿತು. ಸೇನೆಯ ವಿವಿಧ ಸೇವೆಗಳಲ್ಲಿ ಮಹಿಳೆಯರು ಕೆಲಸ ಮಾಡಲು ಹಲವು ತೊಡಕುಗಳಿವೆ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯವು ತಿರಸ್ಕರಿಸಿತು.

ದೈಹಿಕವಾಗಿ ಮಹಿಳೆಯರು ದುರ್ಬಲ ಮತ್ತು ಹೆಣ್ಣು ಎಂಬ ಕಾರಣಕ್ಕಾಗಿಯೇ ಅವರು ಕುಟುಂಬದಲ್ಲಿ ಹಲವು ಹೊಣೆಗಳನ್ನು ನಿಭಾಯಿಸಬೇಕಾಗುತ್ತದೆ. ಇವು ಸೇನೆಯಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿ ಎಂಬ ಕೇಂದ್ರದ ವಾದವನ್ನು ಕೋರ್ಟ್‌ ಒಪ್ಪಲಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕವೂ ಈ ರೀತಿ ಯೋಚಿಸುತ್ತಿರುವುದು ಸರಿಯಲ್ಲ. ಧೋರಣೆಗಳು ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು.

ದೆಹಲಿ ನ್ಯಾಯಾಲಯದ ತೀರ್ಪಿನ ಮೇಲೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಫೆಬ್ರುವರಿಯಲ್ಲಿ ನೀಡಲಾದ ತೀರ್ಪಿನ ಜಾರಿಗೆ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ನೀಡಿತ್ತು.

ಮಹಿಳಾ ಅಧಿಕಾರಿಗಳನ್ನು ಪೂರ್ಣಾವಧಿಗೆ ನೇಮಿಸುವುದಕ್ಕಾಗಿ ಕಾಯಂ ನೇಮಕ ಆಯ್ಕೆ ಮಂಡಳಿಯು ಹಲವು ಸಿದ್ಧತೆಗಳನ್ನು ನಡೆಸಬೇಕಿದೆ. ಆಯ್ಕೆಗೆ ಅರ್ಹರಾದ ಎಲ್ಲ ಮಹಿಳಾ ಅಧಿಕಾರಿಗಳು ತಮ್ಮ ಆಯ್ಕೆಯನ್ನು ತಿಳಿಸಿ, ಅಗತ್ಯ ದಾಖಲೆ ಪತ್ರಗಳಲ್ಲಿ ಸಲ್ಲಿಸಿದ ಬಳಿಕ ಆಯ್ಕೆ ಮಂಡಳಿಯ ಸಭೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.