ADVERTISEMENT

ಡಿಡಿಸಿ ಚುನಾವಣೆ: ಬಿಜೆಪಿಯೇತರ ಪಕ್ಷಗಳಿಗೆ ಉದ್ದೇಶಪೂರ್ವಕ ತಡೆ -ಮೆಹಬೂಬ ಆರೋಪ

ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಆರೋಪ

ಪಿಟಿಐ
Published 21 ನವೆಂಬರ್ 2020, 10:46 IST
Last Updated 21 ನವೆಂಬರ್ 2020, 10:46 IST
ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಗೆ ಸ್ಪರ್ಧಿಸಿರುವ ಬಿಜೆ‍ಪಿಯೇತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮುಕ್ತವಾಗಿ ಚುನಾವಣಾ ಪ್ರಚಾರ ನಡೆಸದಂತೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದೆ ಎಂದು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬ ಮಫ್ತಿ ಆರೋಪಿಸಿದ್ದಾರೆ.

’ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿಯೇತರ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡುತ್ತಿದೆ‘ ಎಂದು ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

‘ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಸೇರಿದಂತೆ ಕಣಿವೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಒಂದು ಹಂತದವರೆಗೆ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರು. ಆದರೆ, ಈ ಪಕ್ಷದ ಅಭ್ಯರ್ಥಿಗಳನ್ನು ಹಲವು ವಸತಿಗೃಹಗಳಲ್ಲಿ ಬಂಧಿಸಿಡಲಾಗಿದೆ. ಈ ಮೂಲಕ ಅವರಿಗೆ ಪ್ರಚಾರ ಮಾಡಲು ಅವಕಾಶ ನೀಡುತ್ತಿಲ್ಲ‘ ಎಂದು ಮೆಹಬೂಬ ಆರೋಪಿಸಿದ್ದಾರೆ.

ADVERTISEMENT

ಭದ್ರತೆಯ ನೆಪದಲ್ಲಿ ಪಿಡಿಪಿಯ ಅಭ್ಯರ್ಥಿ ಬಶೀರ್ ಅಹ್ಮದ್ ಅವರನ್ನು ಪಹಲ್ಗಂನಲ್ಲಿ ಬಂಧಿಸಲಾಗಿದೆ. ನಾಮಪತ್ರ ಸಲ್ಲಿಸಲು ಇಂದು ಕೊನೆಯದಿನವಾಗಿದ್ದು, ಬಶೀರ್ ಅವರನ್ನು ಬಿಡುಗಡೆ ಮಾಡುವಂತೆ ಮೆಹಬೂಬ ಅವರು ಅನಂತ್‌ನಾಗ್ ಜಿಲ್ಲೆಯ ಜಿಲ್ಲಾಧಿಕಾರಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಮುಫ್ತಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ’ಪ್ರತಿ ಅಭ್ಯರ್ಥಿಗೆ ಭದ್ರತೆ ಒದಗಿಸುವುದು ಕಷ್ಟವಾದ ಕಾರಣ, ಅಭ್ಯರ್ಥಿಗಳಿಗೆ ಸಾಮೂಹಿಕ ಭದ್ರತೆ ಒದಗಿಸುವ ಜತೆಗೆ, ಸುರಕ್ಷಿತ ಪ್ರದೇಶಗಳಲ್ಲಿ ಇರಿಸಲಾಗುತ್ತಿದೆ‘ ಎಂದು ಪೊಲೀಸರು ಹೇಳಿದ್ದಾರೆ.

ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್, ‘ಅಭ್ಯರ್ಥಿಗಳಿಗೆ ದುಪ್ಪಟ್ಟು ಬೆಂಗಾವಲು ಒದಗಿಸಿದ್ದೇವೆ. ಅವರು ತಮ್ಮ ವಸತಿ ಗೃಹದಿಂದ ಚುನಾವಣಾ ಪ್ರಚಾರಕ್ಕೆ ತೆರಳುವ ಪ್ರದೇಶದವರೆಗೂ ಭದ್ರತಾ ಪಡೆಗಳು ಅಭ್ಯರ್ಥಿಗಳಿಗೆ ರಕ್ಷಣೆ ಒದಗಿಸುತ್ತಿದ್ದಾರೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.