ADVERTISEMENT

ನ್ಯಾ. ಯಶವಂತ್ ವರ್ಮಾ ಪದಚ್ಯುತಗೊಳಿಸುವ ನಿರ್ಣಯ | ಸಹಿ ಸಂಗ್ರಹ ಶೀಘ್ರ: ರಿಜಿಜು

ನ್ಯಾ. ಯಶವಂತ್ ವರ್ಮಾ ಪದಚ್ಯುತಗೊಳಿಸುವ ನಿರ್ಣಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:26 IST
Last Updated 3 ಜುಲೈ 2025, 15:26 IST
ಯಶವಂತ್‌ ವರ್ಮಾ
ಯಶವಂತ್‌ ವರ್ಮಾ   

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಬೆಂಬಲಿಸಲು ವಿರೋಧ ಪಕ್ಷಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಸಂಸದರ ಸಹಿ ಸಂಗ್ರಹ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಪದಚ್ಯುತಗೊಳಿಸುವ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸಬೇಕೆ ಅಥವಾ ರಾಜ್ಯಸಭೆಯಲ್ಲಿ ಮಂಡಿಸಬೇಕೆ ಎಂಬುದನ್ನು ಸರ್ಕಾರ ಇನ್ನೂ ನಿರ್ಧರಿಸಿಲ್ಲ ಎಂದು ಗುರುವಾರ ತಿಳಿಸಿದ್ದಾರೆ.

‘ಲೋಕಸಭೆಯಲ್ಲಿ ಮಂಡಿಸಲು ಕನಿಷ್ಠ 100 ಸಂಸದರ ಸಹಿ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಲು ಕನಿಷ್ಠ 50 ಸಂಸದರ ಸಹಿ ಅಗತ್ಯವಿದೆ. ನಿರ್ಣಯವನ್ನು ಎಲ್ಲಿ ಮಂಡಿಸಬೇಕು ಎಂದು ಸರ್ಕಾರ ನಿರ್ಧರಿಸಿದ ನಂತರ ಸಹಿ ಸಂಗ್ರಹ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 21ರಂದು ಪ್ರಾರಂಭವಾಗಿ ಆಗಸ್ಟ್ 21ಕ್ಕೆ ಕೊನೆಗೊಳ್ಳಲಿದೆ.

ನ್ಯಾಯಮೂರ್ತಿಯೊಬ್ಬರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಸಂಸತ್ತಿನ ಯಾವುದೇ ಸದನದಲ್ಲಿ ಅಂಗೀಕರಿಸಿದ ನಂತರ, ಸ್ಪೀಕರ್‌ ಅಥವಾ ಸಭಾಪತಿ ಅವರು ಯಾವ ಅಧಾರದಲ್ಲಿ ಪದಚ್ಯುತಗೊಳಿಸಲು ಕೋರಲಾಗಿದೆ ಎಂಬುದರ ತನಿಖೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸುವರು.

ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅಥವಾ ಒಬ್ಬರು ನ್ಯಾಯಮೂರ್ತಿ, 25 ಹೈಕೋರ್ಟ್‌ಗಳ ಪೈಕಿ ಒಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಒಬ್ಬರು ನ್ಯಾಯಶಾಸ್ತ್ರಜ್ಞರು ಸಮಿತಿಯಲ್ಲಿ ಇರುವರು.

ನ್ಯಾಯಮೂರ್ತಿ ವರ್ಮಾ ಅವರು ದೆಹಲಿ ಹೈಕೋರ್ಟ್‌ ನ್ಯಾಯಾಮೂರ್ತಿಯಾಗಿದ್ದ ಸಂದರ್ಭದಲ್ಲಿ ಅವರ ಅಧಿಕೃತ ನಿವಾಸದಲ್ಲಿ ನಗದು ಪತ್ತೆಯಾದ ಆರೋಪ ಕೇಳಿಬಂದಿತ್ತು. ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ್ದ  ವಿಚಾರಣಾ ಸಮಿತಿ ತಿಳಿಸಿದೆ. ಅವರನ್ನು ಸೇವೆಯಿಂದ ತೆಗೆದುಹಾಕುವಂತೆಯೂ ಶಿಫಾರಸು ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.