ADVERTISEMENT

ಬಿಜೆಪಿ, ಕಾಂಗ್ರೆಸ್‌ನಿಂದ ಮಾಯಾ ದೂರ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 17:55 IST
Last Updated 16 ನವೆಂಬರ್ 2018, 17:55 IST
ಮಾಯಾವತಿ
ಮಾಯಾವತಿ   

ರಾಯಪುರ: ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ–ಜನತಾ ಕಾಂಗ್ರೆಸ್‌ ಛತ್ತೀಸಗಡ (ಜೆಸಿಸಿ) ಪಕ್ಷಗಳ ಮೈತ್ರಿಕೂಟಕ್ಕೆ ಬಹುಮತ ಬಾರದಿದ್ದರೆ ಕಾಂಗ್ರೆಸ್‌ ಅಥವಾ ಬಿಜೆಪಿ ಜತೆಗೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ದೃಢಪಡಿಸಿದ್ದಾರೆ.

‘ರಾಜ್ಯದಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ. ಬಳಿಕ ನಿಧಾನವಾಗಿ ನಕ್ಸಲ್‌ ಸಮಸ್ಯೆ ಪರಿಹಾರವಾಗಲಿದೆ. ನಕ್ಸಲರೇ ಶರಣಾಗಲಿದ್ದಾರೆ. ಮೈತ್ರಿಕೂಟಕ್ಕೆ ಬೆಂಬಲ ಕೊಡಿ. ನಾವು ಏನು ಹೇಳುತ್ತೇವೆಯೋ ಅವೆಲ್ಲವನ್ನೂ ಜಾರಿಗೆ ತರುತ್ತೇವೆ’ ಎಂದು ಛತ್ತೀಸಗಡದ ಅರಂಗ್‌ ಕ್ಷೇತ್ರದಲ್ಲಿ ಚುನಾವಣಾ ಪ‍್ರಚಾರ ಸಭೆಯಲ್ಲಿ ಹೇಳಿದರು.

‘ನಮ್ಮದು ಕೇವಲ ಪಕ್ಷವಲ್ಲ, ಅದೊಂದು ಚಳವಳಿ. ಭರವಸೆಗಳ ಆಧಾರದಲ್ಲಿ ಮತ ಕೇಳುವ ಪಕ್ಷವು ಅಭಿವೃದ್ಧಿಯನ್ನು ದೂರ ಇಟ್ಟಿದೆ. ಕಾಂಗ್ರೆಸ್‌ ಪಕ್ಷವು ಬಹಳ ಕಾಲದಿಂದ ಅಧಿಕಾರದಲ್ಲಿತ್ತು. ಆದರೆ ಬಡವರಿಗಾಗಿ ಏನನ್ನೂ ಮಾಡಿಲ್ಲ’ ಎಂದೂ ಅವರು ಆರೋಪಿಸಿದರು.

ADVERTISEMENT

ಜೆಸಿಸಿ ಮುಖ್ಯಸ್ಥ ಅಜಿತ್‌ ಜೋಗಿ ಅವರೂ ವೇದಿಕೆಯಲ್ಲಿ ಇದ್ದರು. ಮಾಯಾವತಿ ಅವರನ್ನು ಮುಂದಿನ ಪ್ರಧಾನಿ ಮಾಡಬೇಕು ಎಂದು ಅವರು ಕರೆ ಕೊಟ್ಟರು. ‘ಯಾವುದೇ ಪಕ್ಷದ ಜತೆಗೆ ನಮ್ಮ ಮೈತ್ರಿಕೂಟವು ಸೇರುವುದಿಲ್ಲ. ನಮ್ಮ ಮೈತ್ರಿಕೂಟವೇ ಸರ್ಕಾರ ರಚಿಸಲಿದೆ. ರಾಹುಲ್‌ ಗಾಂಧಿ ಮತ್ತು ಅಮಿತ್‌ ಶಾ ಅವರು ಕನಸು ಕಾಣುವುದು ನಿಲ್ಲಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.