ADVERTISEMENT

ಬಘೆಲ್‌ ಬಗಲಿಗೆ ಛತ್ತೀಸಗಡ ಸಿ.ಎಂ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ಬಘೆಲ್‌
ಬಘೆಲ್‌   

ರಾಯಪುರ: ಹಲವು ದಿನಗಳ ಭಾರಿ ಸಮಾಲೋಚನೆ ಬಳಿಕ ಛತ್ತೀಸಗಡ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕಾಂಗ್ರೆಸ್‌ನ ಹಿರಿಯ ಮುಖಂಡ ಭೂಪೇಶ್‌ ಬಘೆಲ್‌ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಭಾನುವಾರ ಇಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಪಕ್ಷದ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಅವರು ಬಘೆಲ್‌ ಆಯ್ಕೆಯನ್ನು ಪ್ರಕಟಿಸಿದರು.

ಬಘೆಲ್‌ ಸೋಮವಾರ ಸಂಜೆ ಐದು ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದು ಸಚಿವರಾಗಿ ಇತರರು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಖರ್ಗೆ ತಿಳಿಸಿದ್ದಾರೆ.

ADVERTISEMENT

ವಿರೋಧ ಪಕ್ಷದ ನಾಯಕರಾಗಿದ್ದ ಟಿ.ಎಸ್‌. ಸಿಂಹದೇವ್‌, ಹಿರಿಯ ಮುಖಂಡರಾದ ತಾಮ್ರಧ್ವಜ ಸಾಹು ಮತ್ತು ಚರಣ್‌ ದಾಸ್‌ ಮಹಾಂತ ಅವರಿಂದ ಬಘೆಲ್‌ಗೆ ತೀವ್ರ ಪೈಪೋಟಿ ಎದುರಾಗಿತ್ತು. ಹಾಗಾಗಿ ಎಲ್ಲರ ಮನವೊಲಿಕೆ ನಂತರ ಬಘೆಲ್‌ ಅವರನ್ನು ಆಯ್ಕೆ ಮಾಡಲು ಕೆಲವು ದಿನಗಳೇ ಬೇಕಾದವು.

‘ಎಲ್ಲ ನಾಲ್ವರು ಮುಖಂಡರು ಪಕ್ಷಕ್ಕೆ ಒಂದೇ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರೆಲ್ಲರೂ ಸಮಾನರು. ಹಾಗಾಗಿ ಮುಖ್ಯಮಂತ್ರಿ ಆಯ್ಕೆ ಬಹಳ ಕ್ಲಿಷ್ಟಕರವಾಗಿತ್ತು’ ಎಂದು ಖರ್ಗೆ ಹೇಳಿದ್ದಾರೆ.

‘15 ವರ್ಷಗಳ ಬಳಿಕ ಪಕ್ಷ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಮ್ಮ ಮುಂದೆ ಹಲವು ಸವಾಲುಗಳಿವೆ. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು’ ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿ ಬಘೆಲ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಇಂದು ಪ್ರಮಾಣ

* ಬೆಳಿಗ್ಗೆ ರಾಜಸ್ಥಾನ ಮುಖ್ಯಮಂತ್ರಿಯಾಗಿ ಅಶೋಕ್‌ ಗೆಹ್ಲೋಟ್‌, ಉಪಮುಖ್ಯಮಂತ್ರಿಯಾಗಿ ಸಚಿನ್‌ ಪೈಲಟ್‌

* ಮಧ್ಯಾಹ್ನ 1.30ಕ್ಕೆ ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿ ಕಮಲನಾಥ್‌

* ಸಂಜೆ 5 ಗಂಟೆಗೆ ಛತ್ತೀಸಗಡ ಮುಖ್ಯಮಂತ್ರಿಯಾಗಿ ಭೂಪೇಶ್‌ ಬಘೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.