ADVERTISEMENT

ಮಗನಿಗೆ ಒಳ್ಳೆಯ ಶಿಕ್ಷಣದ ಉದ್ದೇಶ: ಸ್ವಂತ ಚಾಲಕನಿಂದಲೇ ದಂಪತಿ ಕೊಲೆ

​ಪ್ರಜಾವಾಣಿ ವಾರ್ತೆ
Published 8 ಮೇ 2022, 14:19 IST
Last Updated 8 ಮೇ 2022, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಉದ್ದೇಶ ಹೊಂದಿದ್ದ ಕಾರು ಚಾಲಕ, ಅಮೆರಿಕದಿಂದ ಮರಳಿದ ದಂಪತಿಯನ್ನು ಕೊಲೆ ಮಾಡಿ, ದೇಹಗಳನ್ನು ಅವರದೇ ತೋಟದ ಮನೆಯಲ್ಲಿ ಹೂತು ಹಾಕಿದ ಘಟನೆ ಚೆನ್ನೈನಲ್ಲಿ ನಡೆದಿದೆ.

‘ಉದ್ಯಮಿ ಶ್ರೀಕಾಂತ್‌ (60) ಹಾಗೂ ಸುನಂದಾ (55) ಮೃತಪಟ್ಟ ದಂಪತಿ. ಲಾಲ್‌ ಕೃಷ್ಣ ಎಂಬಾತ ಶ್ರೀಕಾಂತ್‌ ಅವರ ಬಳಿ ಸುಮಾರು 10 ವರ್ಷಗಳಿಂದಲೂ ಚಾಲಕ ಹಾಗೂ ಸಹಾಯಕ ವೃತ್ತಿ ಮಾಡುತ್ತಿದ್ದ. ಶ್ರೀಕಾಂತ್‌ ಅವರು ತಮ್ಮ ಮಗ ಶಶಾಂತ್‌ನನ್ನು ನೋಡಲು ಅಮೆರಿಕಕ್ಕೆ ಹೋಗಿದ್ದರು. ಮರಳಿ ಬಂದ ಮೇಲೆ ಅವರನ್ನು ಕೊಲೆ ಮಾಡಿ, ಅವರ ಬಳಿ ಇದ್ದ ಹಣ ಹಾಗೂ ಚಿನ್ನಾಭರಣ ದೋಚಲು ಮೊದಲೇ ಯೋಜನೆ ರೂಪಿಸಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

ಆರೋಪಿ ಲಾಲ್‌ ಕೃಷ್ಣ ದಂಪತಿಗಳನ್ನು ಮೈಲಾಪುರದ ಅವರ ಸ್ವಂತ ಮನೆಯಲ್ಲಿ ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ. ಬಳಿಕ ಪೂರ್ವ ಕರಾವಳಿ ರಸ್ತೆಯ ನೆಮಿಲಿಚೆರಿಯಲ್ಲಿರುವ ತೋಟದ ಮನೆಯಲ್ಲಿ, ಆಗಲೇ ಅಗೆದಿಟ್ಟಿದ್ದ ಗುಂಡಿಯಲ್ಲಿ ಹೂತು ಹಾಕಿದ್ದಾನೆ.

ADVERTISEMENT

ಭಾನುವಾರದಂದು ಚೆಂಗಲಪಟ್ಟು ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಮೃತದೇಹಗಳನ್ನು ಗುಂಡಿಯಿಂದ ಹೊರತೆಗೆಯಲಾಗಿದೆ.

‘ಕೊಲೆ ಮಾಡಿ, ದಂಪತಿಯ ದೇಹಗಳನ್ನು ಹೂತು ಹಾಕಿದ ನಂತರ ಆರೋಪಿಯು ಚೆನ್ನೈನಿಂದ ತಲೆಮರೆಸಿಕೊಂಡಿದ್ದ. ವಿವಿಧ ವಿಧಾನಗಳ ಮೂಲಕ ಪ್ರಯತ್ನಿಸಿದಾಗ ಆರೋಪಿಯ ಆಂಧ್ರಪ್ರದೇಶದ ಒಂಗೋಲೆಯಲ್ಲಿರುವುದು ತಿಳಿದು ಬಂದಿತು. ಅವನನ್ನು ಬಂಧಿಸಿದಾಗ, ಈ ಕೊಲೆಗಳನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಯುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎನ್‌. ಕಣ್ಣನ್‌ ಹೇಳಿದರು.

‌‘ಆರೋಪಿಯಿಂದ ₹5 ಕೋಟಿ ಮೌಲ್ಯದ 8 ಕೆ.ಜಿ. ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೆ ಸಹಾಯ ಮಾಡಿದ ಕೃಷ್ಣನ ಸ್ನೇಹಿತನನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಈ ಪ್ರಕರಣ ದಂಪತಿಗಳ ಮಗ ಶಶಾಂತ್‌ನಿಂದ ಬೆಳಕಿಗೆ ಬಂದಿದೆ. ಅಮೆರಿಕದಿಂದ ಮರಳಿದ ಮೇಲೆ ಶಶಾಂತ್‌ ತನ್ನ ಪೋಷಕರಿಗೆ ಕರೆ ಮಾಡಿದ್ದಾನೆ. ಆದರೆ ಕರೆ ಪೋಷಕರಿಗೆ ತಲುಪಲಿಲ್ಲ. ಬಳಿಕ ಶಶಾಂತ್‌ ಕೃಷ್ಣನಿಗೆ ಕರೆ ಮಾಡಿದಾಗ, ಶ್ರೀಕಾಂತ್‌ ದಂಪತಿ ಮಲಗಿದ್ದಾರೆ ಎಂದು ಕೃಷ್ಣ ಹೇಳಿದ್ದಾನೆ.

ಮತ್ತೊಂದು ಬಾರಿ ಕರೆ ಮಾಡಿದಾಗ ಕೃಷ್ಣನ ವರ್ತನೆ ಶಶಾಂತ್‌ ಅವರಲ್ಲಿ ಅನುಮಾನ ಹುಟ್ಟು ಹಾಕಿವೆ. ಆಗ ಶಶಾಂತ್‌ ಅಡ್ಯಾರ್‌ನಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡಿ, ಪೋಷಕರ ಬಗ್ಗೆ ವಿಚಾರಿಸಲು ಹೇಳಿದ್ದಾನೆ. ಸಂಬಂಧಿಕರು ಮನೆಗೆ ಬಂದು ಪರೀಕ್ಷಿಸಿದಾಗ ಮನೆಗೆ ಬೀಗ ಹಾಕಿದ್ದನ್ನು ನೋಡಿದ್ದಾರೆ.

ಶ್ರೀಕಾಂತ್‌ ದಂಪತಿ ಅಪಹರಣವಾಗಿರಬಹುದೆಂದು ತಿಳಿದ ಅವರ ಸಂಬಂಧಿಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿ, ತೋಟದ ಮನೆ ಪರಿಶೀಲಿಸುವ ವೇಳೆ ದಂಪತಿ ಮೃತಪಟ್ಟಿರುವುದು ಗೊತ್ತಾಗಿದೆ.

ಕೃಷ್ಣ, ಶ್ರೀಕಾಂತ್‌ ದಂಪತಿಗಳಿಗೆ ಹೊಸಬನೇನು ಅಲ್ಲ. ಆತನ ಪೋಷಕರು ಶ್ರೀಕಾಂತ್‌ ಅವರ ತೋಟದ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಡಾರ್ಜಿಲಿಂಗ್‌ನಲ್ಲಿ ಓದುತ್ತಿರುವ ತಮ್ಮ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದಕೃಷ್ಣ ಈ ಕೃತ್ಯ ಎಸಗಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.