ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ನವದೆಹಲಿ: 2023ರಲ್ಲಿ ಭಾರತದಲ್ಲಿ ಶೇ 30ಕ್ಕೂ ಹೆಚ್ಚು ಬಾಲಕಿಯರು ಮತ್ತು ಶೇ 13ಕ್ಕೂ ಹೆಚ್ಚು ಬಾಲಕರು 18 ವರ್ಷ ತುಂಬುವ ಮುನ್ನ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ ಎಂದು ವೈದ್ಯಕೀಯ ನಿಯತಕಾಲಿಕೆ 'ದಿ ಲ್ಯಾನ್ಸೆಟ್ ಜರ್ನಲ್' ವರದಿ ತಿಳಿಸಿದೆ.
1990 ರಿಂದ 2023ರ ಅವಧಿಯಲ್ಲಿ 200ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣಗಳ ವಿಶ್ಲೇಷಣೆ ವೇಳೆ, ದಕ್ಷಿಣ ಏಷ್ಯಾದಲ್ಲಿ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಬಾಂಗ್ಲಾದೇಶದಲ್ಲಿ ಶೇ 9.3ರಷ್ಟು ಪ್ರಕರಣಗಳಿದ್ದರೆ, ಭಾರತದಲ್ಲಿ ಶೇ 30ರಷ್ಟು ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.
ಪ್ರಪಂಚದಾದ್ಯಂತ, ಪ್ರತಿ ಐವರು ಹೆಣ್ಣು ಮಕ್ಕಳಲ್ಲಿ ಒಬ್ಬರು ಮತ್ತು ಏಳು ಗಂಡು ಮಕ್ಕಳಲ್ಲಿ ಒಬ್ಬರು 18 ವರ್ಷಕ್ಕೂ ಮುನ್ನ ಲೈಂಗಿಕ ದೌರ್ಜನ್ಯ ಅನುಭವಿಸುತ್ತಾರೆ ಎಂದು ಅಂದಾಜಿಸಲಾಗಿದೆ.
ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ಮಾಪನ ಮತ್ತು ಮೌಲ್ಯಮಾಪನ ಸಂಸ್ಥೆಯ ತಜ್ಞರನ್ನೊಳಗೊಂಡ ಸಂಶೋಧಕರ ತಂಡವು, 18ಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಫ್ರಿಕಾ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಂಡುಬಂದಿವೆ. ಜಿಂಬಾಬ್ವೆಯಲ್ಲಿ ಶೇ 8ರಷ್ಟು ಮತ್ತು ಕೋಟ್ ಡಿ'ಐವೋರ್‌ನಲ್ಲಿ ಶೇ 28ರಷ್ಟು ಮಕ್ಕಳು ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಸಾರ್ವಜನಿಕ ಆರೋಗ್ಯ ಮತ್ತು ಮಾನವ ಹಕ್ಕುಗಳ ಗಂಭೀರ ಸಮಸ್ಯೆಯಾಗಿದೆ. ಇಂತಹ ಕೃತ್ಯಗಳಿಂದಾಗುವ ಪರಿಣಾಮಗಳು ಮಾನಸಿಕ ಆರೋಗ್ಯ ಸ್ಥಿತಿಗೆ ಅಪಾಯ ತಂದೊಡ್ಡುತ್ತವೆ. ಇದರಿಂದಾಗಿ, ಸಂತ್ರಸ್ತರ ದೀರ್ಘಕಾಲೀನ ಆರೋಗ್ಯದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಪ್ರಕರಣಗಳನ್ನು ತಡೆಗಟ್ಟಲು, ಪ್ರಕರಣಗಳನ್ನು ನಿಖರವಾಗಿ ಪತ್ತೆ ಹಚ್ಚುವುದು ಮುಖ್ಯ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.