ADVERTISEMENT

ಚೀನಾದಿಂದ 38 ಸಾವಿರ ಚ.ಕಿ.ಮೀ. ಅತಿಕ್ರಮಣ: ಸಚಿವ ಮುರಳೀಧರನ್

ಲೋಕಸಭೆಗೆ ಮಾಹಿತಿ ನೀಡಿದ ಸಚಿವ ಮುರಳೀಧರನ್

ಪಿಟಿಐ
Published 4 ಫೆಬ್ರುವರಿ 2022, 18:25 IST
Last Updated 4 ಫೆಬ್ರುವರಿ 2022, 18:25 IST
ವಿ.ಮುರಳೀಧರನ್
ವಿ.ಮುರಳೀಧರನ್   

ನವದೆಹಲಿ: ‘ಭಾರತದ 38,000 ಚದರ ಕಿ.ಮೀ.ನಷ್ಟು ಭೂಪ್ರದೇಶವನ್ನು ಕಳೆದ ಆರು ದಶಕಗಳಿಂದಲೂ ಚೀನಾ ಅತಿಕ್ರಮಿಸಿಕೊಂಡಿದೆ’ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಶುಕ್ರವಾರ ತಿಳಿಸಿದೆ.

ಪ್ರಶ್ನೋತ್ತರ ವೇಳೆ ಸದನಕ್ಕೆ ಈ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ‘ಪಾಕಿಸ್ತಾನವು 1963ರಲ್ಲಿ ಶಕ್ಸಗಂ ಕಣಿವೆಯಲ್ಲಿ ತಾನು ಅತಿಕ್ರಮಿಸಿದ್ದ ಭಾರತದ 5,180 ಚದರ ಕಿ.ಮೀ.ನಷ್ಟು ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ’ ಎಂದು ತಿಳಿಸಿದರು.

‘5,180 ಚದರ ಕಿ.ಮೀ. ಪ್ರದೇಶವನ್ನು ಅಕ್ರಮವಾಗಿ ಬಿಟ್ಟುಕೊಟ್ಟಿರುವುದಕ್ಕೆ ಸಂಬಂಧಿಸಿ ಪಾಕಿಸ್ತಾನ ಮತ್ತು ಚೀನಾ ನಡುವೆ 1963ರಲ್ಲಿ ‘ಗಡಿ ಒಪ್ಪಂದ’ ಏರ್ಪಟ್ಟಿದೆ. ಆದರೆ, ಈ ಒಪ್ಪಂದಕ್ಕೆ ಭಾರತ ಮಾನ್ಯತೆ ನೀಡಿಲ್ಲ. ಈ ಒಪ್ಪಂದ ಕಾನೂನುಬಾಹಿರ ಹಾಗೂ ಅಸಿಂಧು ಎಂಬುದಾಗಿ ಭಾರತ ಪ್ರತಿಪಾದಿಸುತ್ತಲೇ ಇದೆ’ ಎಂದೂ ಹೇಳಿದರು.

ADVERTISEMENT

ಗಡಿ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಪ್ಯಾಂಗಾಂಗ್‌ ಸರೋವರ ಬಳಿ ಚೀನಾ ನಿರ್ಮಿಸುತ್ತಿರುವ ಸೇತುವೆಯು ಆ ದೇಶವು 1962ರಿಂದಲೂ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶದಲ್ಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.