ADVERTISEMENT

ದಕ್ಷಿಣ ಚೀನಾ ಭಾಗದಸಮುದ್ರದಲ್ಲಿ ನೌಕಾಪಡೆ ಚಟುವಟಿಕೆ:ಅಮೆರಿಕ–ಚೀನಾ ವಾಗ್ವಾದ

ಪಿಟಿಐ
Published 20 ಮೇ 2021, 11:20 IST
Last Updated 20 ಮೇ 2021, 11:20 IST
ದಕ್ಷಿಣ ಚೀನಾ ಸಮುದ್ರ ಭಾಗದ ಅಂತರರಾಷ್ಟ್ರೀಯ ಗಡಿಯಲ್ಲಿ ಅಮೆರಿಕದ ಯುದ್ಧ ವಿಮಾನದ ಗಸ್ತು (ಸಂಗ್ರಹ ಚಿತ್ರ)
ದಕ್ಷಿಣ ಚೀನಾ ಸಮುದ್ರ ಭಾಗದ ಅಂತರರಾಷ್ಟ್ರೀಯ ಗಡಿಯಲ್ಲಿ ಅಮೆರಿಕದ ಯುದ್ಧ ವಿಮಾನದ ಗಸ್ತು (ಸಂಗ್ರಹ ಚಿತ್ರ)   

ಬೀಜಿಂಗ್ (ಎ.ಪಿ): ದಕ್ಷಿಣ ಚೀನಾದ ಸಮುದ್ರ ಭಾಗದಲ್ಲಿ ಅಮೆರಿಕದ ನೌಕಾಪಡೆಯು ಚಟುವಟಿಕೆ ಕೈಗೊಂಡಿದೆ ಎಂದು ಚೀನಾ ಗುರುವಾರ ಪ್ರತಿಭಟಿಸಿದೆ. ಇತ್ತೀಚಿನ ದಿನಗಳಲ್ಲಿ ಇದು ಚೀನಾದ ಎರಡನೇ ಪ್ರತಿಭಟನೆ. ಇದಕ್ಕೆ ಅಮೆರಿಕದ ಸೆವೆಂತ್‌ ಫ್ಲೀಟ್‌ ಆಕ್ಷೇಪಿಸಿದೆ. ನೆರೆ ದೇಶ ತನ್ನ ಸಮುದ್ರಯಾನದ ಹಕ್ಕಿಗೆ ಧಕ್ಕೆತರುತ್ತಿದೆ ಎಂದಿದೆ.

ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿ ಸದರರ್ನ್ ಥಿಯೇಟರ್‌ ಕಮ್ಯಾಂಡ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಮೆರಿಕದ ಕ್ಷಿಪಣಿ ನಾಶಕವಾದ ಯುಎಸ್ಎಸ್‌ ಕರ್ಟಿಸ್‌ ವಿಲ್ಬರ್‌ ‘ಅನಧಿಕೃತ’ವಾಗಿ ತನ್ನ ಪರಿಧಿಯನ್ನು ಪ್ರವೇಶಿಸಿದೆ. ಚೀನಾದ ಸೇನೆ ಸುತ್ತುವರಿದಿದ್ದು, ಉಚ್ಚಾಟಿಸುವ ಕಟು ಎಚ್ಚರಿಕೆಯನ್ನು ನೀಡಿದೆ ಎಂದು ತಿಳಿಸಿದೆ.

ಅಮೆರಿಕವು ಪ್ರಾದೇಶಿಕ ಭದ್ರತೆಗೆ ಧಕ್ಕೆತರುತ್ತಿದ್ದು, ಅವಘಡ, ಅಪನಂಬಿಕೆಗಳಿಗೆ ಆಸ್ಪದವಾಗುತ್ತಿದೆ. ಅಮೆರಿಕದ ಹಡಗಿನ ಪ್ರವೇಶ ಬೇಜವಾಬ್ದಾರಿಯುತವಾಗಿದ್ದು, ವೃತ್ತಿಪರತೆಗೆ ವಿರುದ್ಧವಾಗಿದೆ. ದೇಶದ ಸೇನೆ ಸಾರ್ವಭೌಮತೆಯ ರಕ್ಷಣೆಗೆ ಬದ್ಧವಾಗಿದ್ದು, ದಕ್ಷಿಣ ಚೀನಾದ ಸಮುದ್ರ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಒತ್ತು ನೀಡಿವೆ ಎಂದಿದೆ.

ADVERTISEMENT

ಚೀನಾದ ಹೇಳಿಕೆಯನ್ನು ಅಮೆರಿಕ ತಳ್ಳಿಹಾಕಿದೆ. ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ನಿಯಮಿತವಾಗಿ ಚಟುವಟಿಕೆ ನಡೆಯುತ್ತಿದೆ. ಇದು, ಅಂತರರಾಷ್ಟ್ರೀಯ ಜಲದಲ್ಲಿ ಚಟುವಟಿಕೆ ನಡೆಸುವ ಹಕ್ಕಾಗಿದೆ ಎಂದು ಹೇಳಿದೆ.

ಸುದೀರ್ಘ ವಿವರಣೆ ನೀಡಿರುವ ಸೆವೆಂತ್‌ ಫ್ಲೀಟ್, ಈ ಚಟುವಟಿಕೆಯು ತನ್ನ ಸ್ವಾತಂತ್ರ್ಯ ಹಾಗೂ ಕಾನೂನುಬದ್ಧ ಬಳಕೆಯನ್ನು ಎತ್ತಿಹಿಡಿಯಲಿದೆ. ಈ ಪ್ರದೇಶವು ಅಂತರರಾಷ್ಟ್ರೀಯ ಕಾನೂನಿನಡಿ ಗುರುತಿಸಲಾದ ಸಮುದ್ರ ಭಾಗವಾಗಿದೆ ಎಂದು ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.