ADVERTISEMENT

ಪೌರತ್ವ ಕಾಯ್ದೆ ಪ್ರತಿಭಟನೆ, ಹಿಂಸೆ ಪ್ರಚೋದನೆ: ಪಾಪ್ಯುಲರ್ ಫ್ರಂಟ್ ಮುಖಂಡರ ಸೆರೆ

ಏಜೆನ್ಸೀಸ್
Published 19 ಡಿಸೆಂಬರ್ 2019, 7:33 IST
Last Updated 19 ಡಿಸೆಂಬರ್ 2019, 7:33 IST
   

ಗುವಾಹಟಿ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಡಿ.10 ಹಾಗೂ 11ರಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಪ್ರಚೋದಿಸಿದ ಆರೋಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಇಬ್ಬರು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಪಿಎಫ್ಐ ಅಸ್ಸಾಂ ಘಟಕದ ಅಧ್ಯಕ್ಷ ಅಮೀನುಲ್ ಹಕ್ ಮತ್ತು ಫ್ರಂಟ್‌ನ ಪತ್ರಿಕಾ ಕಾರ್ಯದರ್ಶಿ ಮುಜಮ್ಮಿಳ್ ಹಕ್ ಅವರನ್ನು ಕಾಮರೂಪ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಅಸ್ಸಾಂ ಸಚಿವ ಚಂದ್ರಮೋಹನ್ ಪಟೋವರಿ ತಿಳಿಸಿದ್ದಾರೆ.

ಗುವಾಹಟಿಯ ಹಾಟಿಗಾಂವ್ ಪ್ರದೇಶದಲ್ಲಿ ಬಾಡಿಗೆ ಮನೆಯಿಂದ ಈ ಇಬ್ಬರು ಕಾರ್ಯಾಚರಿಸುತ್ತಿದ್ದರು. ಅವರು ಹಿಂಸಾಚಾರ ನಡೆಸಲು ಯೋಜನೆ ರೂಪಿಸಿದ್ದರು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸುವಂತೆ ಹಲವರನ್ನು ಪ್ರಚೋದಿಸಿದ್ದರು. ಇದಕ್ಕೆ ಪೊಲೀಸರ ಬಳಿ ಸಾಕ್ಷ್ಯಾಧಾರಗಳಿವೆ. ಸರ್ಕಾರ ಈಗಾಗಲೇ ರಚಿಸಿರುವ ವಿಶೇಷ ತನಿಖಾ ತಂಡವು ಈ ಇಬ್ಬರ ಕೃತ್ಯಗಳ ಬಗ್ಗೆ ಹಾಗೂ ಅವರೊಂದಿಗೆ ಬೇರೆ ಯಾರಿದ್ದಾರೆ ಎಂಬ ಕುರಿತು ತನಿಖೆ ಆರಂಭಿಸಿದೆ ಎಂದು ಅವರು ಹೇಳಿದರು.

ADVERTISEMENT

ನಿಷೇಧಿತ ಸಂಘಟನೆಯಾಗಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ)ಯ ಘಟಕಗಳಾದ ಪಿಎಫ್ಐ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳು ಡಿಸೆಂಬರ್ 11ರಂದು ಜನತಾ ಭವನಕ್ಕೆ (ರಾಜ್ಯ ವಿಧಾನಸಭೆ) ಬೆಂಕಿ ಹಚ್ಚುವ ಯೋಜನೆಯಲ್ಲಿ ಭಾಗಿಯಾಗಿದ್ದವು ಎಂದು ರಾಜ್ಯ ಸರ್ಕಾರ ಹೇಳಿದ ಬೆನ್ನಿಗೇ ಇಬ್ಬರು ಬಂಧಿತರಾಗಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಡಿ.10, 11ರಂದು ವಿಧಾನಸಭೆ ಕಾರ್ಯಾಲಯ ಹಾಗೂ ಇತರ ಕಡೆಗಳಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆ ನಡೆಸಲಾಗಿತ್ತಲ್ಲದೆ, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಲಾಗಿತ್ತು. ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಕರ್ಫ್ಯೂ ವಿಧಿಸಲಾಗಿತ್ತು ಮತ್ತು ಇಂಟರ್ನೆಟ್ ನಿಷೇಧಿಸಲಾಗಿತ್ತು. ಪ್ರತಿಭಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು.

ಇದೇ ವೇಳೆ, ಡಿ.21ರಿಂದ 28ರವರೆಗೆ ಸರಣಿ ಪ್ರತಿಭಟನೆ ನಡೆಸುವುದಾಗಿ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು) ಘೋಷಿಸಿದೆ.

ಹೊಸ ತಿದ್ದುಪಡಿ ಕಾಯ್ದೆ ಅನುಷ್ಠಾನವಾದರೆ, 1971ರ ಬಳಿಕ ದೇಶಕ್ಕೆ ಬಂದಿದ್ದ ಹಿಂದೂ ಬಂಗಾಳಿಗಳಿಗೆ ಪೌರತ್ವ ದೊರೆಯುವುದರಿಂದ ಸ್ಥಳೀಯರು ಅಲ್ಪಸಂಖ್ಯಾತರಾಗುತ್ತಾರೆ ಎಂಬುದು ಅಸ್ಸಾಂ ಜನತೆಯ ಆತಂಕ. ಇದಕ್ಕಾಗಿ ಅವರು ಪ್ರತಿಭಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.