ADVERTISEMENT

ವಿಧಾನಸಭೆ ಚುನಾವಣೆಗೆ ಮಮತಾ ಸಿದ್ಧತೆ; ಬಿಜೆಪಿ ವಿರುದ್ಧ ‘ಪೌರತ್ವ’ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 12:03 IST
Last Updated 23 ಜುಲೈ 2020, 12:03 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ:ಪೌರತ್ವ ವಿಷಯವನ್ನೇ ಅಸ್ತ್ರವಾಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಯಾರಿ ನಡೆಸುತ್ತಿದ್ದಾರೆ.

ಮೂಲ ಬಂಗಾಳಿಗಳ ಕೈಯಲ್ಲೇರಾಜ್ಯದ ಆಡಳಿತ ಇರಬೇಕು. ಹೊರಗಿನವರಿಗೆ ಆಡಳಿತ ನಡೆಸಲು ಬಿಡಬಾರದು ಎಂಬ ಸಂದೇಶವನ್ನು ಅವರ ಪ್ರಚಾರದ ಮಂತ್ರವಾಗಿಸಿಕೊಂಡಿದ್ದಾರೆ.

ಕೋವಿಡ್‌–19 ಬಿಕ್ಕಟ್ಟನ್ನೇ ಮುನ್ನೆಲೆಗೆ ತರುವ ಮೂಲಕ ಬಂಗಾಳದಲ್ಲಿ ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ವಿಷಯಗಳ ಕುರಿತು ಬಿಜೆಪಿ ನಿರ್ಲಕ್ಷ್ಯ ವಹಿಸುತ್ತಿದೆ. ಆದರೆ, ಇದಕ್ಕೆ ಅವಕಾಶ ಕೊಡದ ಮಮತಾ ಬ್ಯಾನರ್ಜಿ ಕಳೆದ ಮಂಗಳವಾರ ನಡೆದಹುತಾತ್ಮರ ದಿನದ ರ್‍ಯಾಲಿಯಲ್ಲಿ ಈ ವಿಷಯವನ್ನೇ ಪ್ರಮುಖವಾಗಿಸಿಕೊಂಡು ಭಾಷಣ ಮಾಡಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಶೇ 28 ರಷ್ಟು ಅಲ್ಪಸಂಖ್ಯಾತರೇ ಇದ್ದು, ಅವರ ಮತಗಳು ನಿರ್ಣಾಯಕವಾಗಿವೆ. ಹಾಗಾಗಿ, ಪೌರತ್ವಕ್ಕೆ ಸಂಬಂಧಿಸಿದಂತೆ ಈ ಅಲ್ಪಸಂಖ್ಯಾತರಲ್ಲಿ ಇರುವ ಆತಂಕವನ್ನೇ ಪದೇಪದೇ ಪ್ರಸ್ತಾಪಿಸಲು ಅವರು ಯತ್ನಿಸುತ್ತಿದ್ಧಾರೆ.

ಕಳೆದ ಬಾರಿ ಬಿಜೆಪಿ ಗಮನಾರ್ಹ ಯಶಸ್ಸು ಗಳಿಸಿದ್ದ ಗಡಿ ಜಿಲ್ಲೆಗಳಲ್ಲಿ, ಸಿಎಎ ವಿರೋಧಿ ಆಂದೋಲನ ಪ್ರಾರಂಭಿಸುವ ಮೂಲಕ ಹಿಂದೂ ನಿರಾಶ್ರಿತರ ಬೆಂಬಲ ಪಡೆಯಲು ಮಮತಾ ಬ್ಯಾನರ್ಜಿ ಪ್ರಯತ್ನಿಸುತ್ತಿದ್ಧಾರೆ.ಬಂಗಾಳದ ಹಿಂದೂ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವ ನೀಡಲಾಗುವುದು ಎಂದು ಬಿಜೆಪಿ ಸುಳ್ಳು ಹೇಳಿಕೆ ನೀಡುತ್ತಿದೆ ಎಂದು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಅವರು ಯತ್ನಿಸುತ್ತಿದ್ದಾರೆ.

ಬಿಜೆಪಿ ಮುಖಂಡರನ್ನು ಹೊರಗಿನವರು ಎಂದು ಟೀಕಿಸಿರುವ ಅವರು, ಗುಜರಾತಿಗಳು ಬಂಗಾಳದ ಮೇಲೆ ಆಡಳಿತ ನಡೆಸಲು ಬಿಡುವುದಿಲ್ಲ ಎಂದಿದ್ಧಾರೆ.ಎನ್‌ಆರ್‌ಸಿ ವಿರುದ್ಧದ ಆಂದೋಲನದ ಸಂದರ್ಭದಲ್ಲಿ, ಒಳನುಸುಳುಕೋರರನ್ನು ಓಡಿಸುವ ಹೆಸರಿನಲ್ಲಿ ಬಂಗಾಳಿಗಳನ್ನು ಬಿಜೆಪಿ ಗುರಿಯಾಗಿಸಿಕೊಂಡಿತ್ತು ಎಂದು ಅವರು ಆರೋಪಿಸಿದ್ದಾರೆ.

2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಎಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವಂತೆ ಆಗಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.