ನ್ಯಾ.ಬಿ.ಆರ್. ಗವಾಯಿ
ನವದೆಹಲಿ: ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಸುಪ್ರೀಂ ಕೋರ್ಟ್‌ನ 52ನೇ ಮುಖ್ಯನ್ಯಾಯಮೂರ್ತಿಯಾಗಿ (ಸಿಜೆಐ) ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 64 ವರ್ಷದ ನ್ಯಾಯಮೂರ್ತಿ ಗವಾಯಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಅವರು ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿದರು.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಿವೃತ್ತಿಯಿಂದಾಗಿ ಸಿಜೆಐ ಹುದ್ದೆ ತೆರವಾಗಿತ್ತು. ಸಿಜೆಐ ಆಗಿ ಅಧಿಕಾರ ಸ್ವೀಕರಿಸಿರುವ ನ್ಯಾಯಮೂರ್ತಿ ಗವಾಯಿ ಅವರು ಈ ವರ್ಷದ ನವೆಂಬರ್ 23ರಂದು ನಿವೃತ್ತಿ ಹೊಂದುವರು.
ಗವಾಯಿ ಅವರು 2019ರ ಮೇ 24ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ಸಿಜೆಐ ಗವಾಯಿ ಅವರು ತಮ್ಮ ತಾಯಿಯಾದ ಕಮಲತಾಯಿ ಗವಾಯಿ ಅವರ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದರು.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಜೆ.ಪಿ.ನಡ್ಡಾ, ಅರ್ಜುನರಾಮ್ ಮೇಘವಾಲ್, ಮಾಜಿರಾಷ್ಟ್ರಪತಿ ರಾಮನಾಥ ಕೋವಿಂದ್ ಉಪಸ್ಥಿತರಿದ್ದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಸಂಪುಟದ ಸಚಿವರು ಹಾಗೂ ನಿವೃತ್ತ ನ್ಯಾಯಮೂರ್ತಿಗಳು ಕೂಡ ಸಿಜೆಐ ಗವಾಯಿ ಅವರನ್ನು ಅಭಿನಂದಿಸಿದರು.
ಬಿ.ಆರ್. ಗವಾಯಿ ಹಿನ್ನೆಲೆ...
1960ರ ನವೆಂಬರ್ 24ರಂದು ಜನಿಸಿದ ಬಿ.ಆರ್. ಗವಾಯಿ, 1985ರ ಮಾರ್ಚ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದರು. 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ವಕೀಲಿಕೆ ನಡೆಸಿದರು. 1990ರ ನಂತರದಲ್ಲಿ ಅವರು ನಾಗ್ಪುರ ಪೀಠದಲ್ಲಿ ವಕೀಲ ವೃತ್ತಿ ನಡೆಸಿದರು.
2003ರ ನವೆಂಬರ್‌ನಲ್ಲಿ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಆದರು. 2005ರಲ್ಲಿ ಕಾಯಂ ನ್ಯಾಯಮೂರ್ತಿ ಆದರು. 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯಾಗಿ ಪದೋನ್ನತಿ ಪಡೆದರು.
ನ್ಯಾಯಮೂರ್ತಿ ಗವಾಯಿ ಅವರು ಆರ್.ಎಸ್. ಗವಾಯಿ ಅವರ ಪುತ್ರ. ಆರ್.ಎಸ್. ಗವಾಯಿ ಅವರು ಬೇರೆ ಬೇರೆ ರಾಜ್ಯಗಳ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.
‘ಪರಿಶ್ರಮ ಬಡವರ ಸೇವೆ ತುಡಿತಕ್ಕೆ ಸಿಕ್ಕ ಫಲ’
ಅಮರಾವತಿ (ಮಹಾರಾಷ್ಟ್ರ): ‘ಕಠಿಣ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಕಾರ್ಯ ನಿರ್ವಹಿಸಿದ್ದು ನನ್ನ ಮಗನ ಈ ಯಶಸ್ಸಿಗೆ ಕಾರಣ. ಬಡವರ ಸೇವೆ ಮಾಡಬೇಕು ಎಂಬ ತುಡಿತದಿಂದ ಸೇವೆ ಸಲ್ಲಿಸಿದ್ದರಿಂದ ಈ ಪ್ರತಿಫಲ ಸಿಕ್ಕಿದೆ’ ಎಂದು ಸಿಜೆಐ ಭೂಷಣ್ ಆರ್.ಗವಾಯಿ ಅವರ ತಾಯಿಯಾದ ಕಮಲತಾಯಿ ಗವಾಯಿ ಬುಧವಾರ ಹೇಳಿದ್ದಾರೆ. ಸಿಜೆಐ ಅಗಿ ಗವಾಯಿ ಅವರು ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಹೊಸ ಹುದ್ದೆಗೆ ನನ್ನ ಮಗ ನ್ಯಾಯ ದೊರಕಿಸಿ ಕೊಡುವ ವಿಶ್ವಾಸ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ನನ್ನ ಮಕ್ಕಳು ಅವರ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜ ಮತ್ತು ಜನರ ಸೇವೆ ಮಾಡಬೇಕು. ಎಲ್ಲರಿಗೂ ನ್ಯಾಯ ದೊರಕಿಸಿಕೊಡಬೇಕು ಎಂಬುದು ಒಬ್ಬ ತಾಯಿಯಾಗಿ ನನ್ನ ಬಯಕೆಯಾಗಿತ್ತು’ ಎಂದೂ ಹೇಳಿದ್ದಾರೆ. ಸಿಜೆಐ ಗವಾಯಿ ಅವರ ತಂದೆ ದಿವಂಗತ ಆರ್.ಎಸ್.ಗವಾಯಿ ಅವರು ಬಿಹಾರ ಕೇರಳ ಹಾಗೂ ಸಿಕ್ಕಿಂ ರಾಜ್ಯಪಾಲರಾಗಿದ್ದರು. ರಾಜ್ಯಪಾಲ ಹುದ್ದೆಗೇರುವ ಮುನ್ನ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಪ್ರಮುಖ ನಾಯಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.