ADVERTISEMENT

ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು: ಸಿಜೆಐ ಕ್ರಮಕ್ಕೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 16:00 IST
Last Updated 5 ಅಕ್ಟೋಬರ್ 2022, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ನಾಲ್ವರು ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರು ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡಿದ್ದಾರೆ. ಆದರೆ, ಕೊಲಿಜಿಯಂನಲ್ಲಿ ಚರ್ಚೆ ನಡೆಸದೆಯೇ ಹೆಸರುಗಳನ್ನು ಶಿಫಾರಸು ಮಾಡಿರುವುದಕ್ಕೆ ಇಬ್ಬರು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿಗಳ ನೇಮಕಕ್ಕೆ ಒಪ್ಪಿಗೆ ನೀಡಲು ಇರುವ ಐವರು ನ್ಯಾಯಮೂರ್ತಿಗಳ ಕೊಲಿಜಿಯಂನಲ್ಲಿ ಇಬ್ಬರು ನ್ಯಾಯಮೂರ್ತಿಗಳು ಲಲಿತ್‌ ಅವರ ಈ ಕ್ರಮಕ್ಕೆ ಬೇಸರಿಸಿದ್ದಾರೆ. ‘ನ್ಯಾಯಮೂರ್ತಿಗಳ ಹೆಸರನ್ನುಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೊದಲು ಕೊಲಿಜಿಯಂ ಸಭೆ ಸೇರಬೇಕು. ಅಲ್ಲಿ ಚರ್ಚೆ ನಡೆಸಿದ ನಂತರವೇ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡುವುದು ಸಂಪ್ರದಾಯ. ಆದರೆ, ಈ ಬಾರಿ ಈ ರೀತಿ ಆಗಿಲ್ಲ’ ಎಂದು ಇಬ್ಬರು ನ್ಯಾಯಮೂರ್ತಿಗಳು ಹೇಳಿದ್ದಾರೆ.

ನವರಾತ್ರಿ ರಜೆಗೂ ಮುನ್ನ ಸೆ.30ಕ್ಕೆ ಕೊಲೆಜಿಯಂ ಸಭೆ ನಡೆಬೇಕಿತ್ತು. ಅದೇ ದಿನ ಕೊಲಿಜಿಯಂನ ಸದಸ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ರಾತ್ರಿ 9ರ ವರೆಗೂ ವಿಚಾರಣೆ ನಡೆಸಿದ್ದರಿಂದ ಸಭೆ ನಡೆಯಲಿಲ್ಲ.

ADVERTISEMENT

ದಸರಾ ರಜೆ ಕಳೆದು ಅ.10ಕ್ಕೆ ನ್ಯಾಯಾಲಯ ಆರಂಭವಾಗಲಿದೆ. ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಅವರು ನ.8ಕ್ಕೆ ನಿವೃತ್ತರಾಗಲಿದ್ದಾರೆ. ಅಂದರೆ ಅ.10ಕ್ಕೆ ಲಲಿತ್‌ ಅವರು ನಿವೃತ್ತಿ ಹೊಂದಲು 28 ದಿನ ಬಾಕಿ ಇರುತ್ತದೆ. ನಿವೃತ್ತಿಗೆ ಒಂದು ತಿಂಗಳಿಗೂ ಕಡಿಮೆ ಅವಧಿ ಇರುವ ಮುಖ್ಯ ನ್ಯಾಯಮೂರ್ತಿಯು ಕೊಲಿಜಿಯಂನ ಸಭೆ ಕರೆದು ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡುವಂತಿಲ್ಲ.

ಸೆ.30ಕ್ಕೆ ಸಭೆ ನಡೆಯದೇ ಇದ್ದ ಕಾರಣ ಕೊಲಿಜಿಯಂನ ಸದಸ್ಯ ನ್ಯಾಯಮೂರ್ತಿಗಳಿಗೆ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡುವಂತೆ ಕೋರಿ ಪತ್ರ ಕಳುಹಿಸಲಾಗುತ್ತದೆ. ಈ ಕ್ರಮವನ್ನು ಇಬ್ಬರು ನ್ಯಾಯಮೂರ್ತಿಗಳು ವಿರೋಧಿಸಿದ್ದಾರೆ. ಇದಕ್ಕೂ ಮೊದಲು ನಡೆದ ಕೊಲಿಜಿಯಂ ಸಭೆಯಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ದತ್ತ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಒಪ್ಪಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.