ADVERTISEMENT

‘ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿಲ್ಲ ಎನ್ನುವುದು ಶುದ್ಧ ಸುಳ್ಳು’

ಪಿಟಿಐ
Published 21 ಜುಲೈ 2021, 10:18 IST
Last Updated 21 ಜುಲೈ 2021, 10:18 IST
ಸತ್ಯೇಂದರ್ ಜೈನ್
ಸತ್ಯೇಂದರ್ ಜೈನ್   

ನವದೆಹಲಿ: ‘ದೆಹಲಿ ಮತ್ತು ದೇಶದ ಹಲವೆಡೆ ಆಮ್ಲಜನಕ ಕೊರತೆಯಿಂದ ಹಲವು ಸಾವುಗಳು ಸಂಭವಿಸಿವೆ’ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಬುಧವಾರ ತಿಳಿಸಿದರು.

‘ಒಂದು ವೇಳೆ ಆಮ್ಲಜನಕ ಕೊರತೆಯಿಲ್ಲದಿದ್ದರೆ, ಆಸ್ಪತ್ರೆಗಳು ನ್ಯಾಯಾಲಯದ ಮೊರೆ ಏಕೆ ಹೋಗುತ್ತಿದ್ದವು?. ಮಾಧ್ಯಮಗಳು ಆಮ್ಲಜನಕ ಕೊರತೆ ಬಗ್ಗೆ ಪ್ರತಿನಿತ್ಯ ವರದಿ ಮಾಡುತ್ತಿದ್ದವು. ಆಸ್ಪತ್ರೆಗಳು ಹೇಗೆ ಆಮ್ಲಜನಕಕ್ಕಾಗಿ ಪರದಾಡುತ್ತಿದ್ದವು ಎಂಬುದನ್ನು ಟಿ.ವಿ ಚಾನೆಲ್‌ಗಳು ತೋರಿಸುತ್ತಿದ್ದವು. ಹಾಗಾಗಿ ಆಮ್ಲಜನಕ ಕೊರತೆಯಿಂದ ಯಾರೂ ಮೃತಪಟ್ಟಿಲ್ಲ ಎನ್ನುವುದು ಶುದ್ಧ ಸುಳ್ಳು. ದೆಹಲಿ ಮತ್ತು ಹಲವು ಭಾಗಗಳಲ್ಲಿ ಆಮ್ಲಜನಕ ಕೊರತೆಯಿಂದ ಹಲವರು ಸಾವಿಗೀಡಾಗಿದ್ದಾರೆ’ ಎಂದು ಅವರು ಹೇಳಿದರು.

ಕೋವಿಡ್‌ –19ರ ಎರಡನೇ ಅಲೆಯ ಸಂದರ್ಭದಲ್ಲಿ, ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಮೃತಪಟ್ಟ ಬಗ್ಗೆ ರಾಜ್ಯಗಳಿಂದ ವರದಿ ಬಂದಿಲ್ಲ ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿತ್ತು.

ADVERTISEMENT

ಆದರೆ ಸೋಂಕಿನ ಎರಡನೇ ಅಲೆಯ ಅವಧಿಯಲ್ಲಿ ದೇಶದಲ್ಲಿ ಆಮ್ಲಜನಕಕ್ಕೆ ಬಹಳ ಬೇಡಿಕೆ ಇತ್ತು.ಮೊದಲ ಅಲೆಯ ಸಂದರ್ಭದಲ್ಲಿ ನಿತ್ಯ 3,095 ಟನ್‌ನಷ್ಟು ಇದ್ದ ಬೇಡಿಕೆ ಎರಡನೇ ಅಲೆಯಲ್ಲಿ 9,000 ಟನ್‌ಗಳಿಗೆ ಏರಿತು. ಆಗ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ರಾಜ್ಯಗಳಿಗೆ ಸಮಾನವಾಗಿ ಆಮ್ಲಜನಕ ವಿತರಣೆ ಮಾಡಬೇಕಾಯಿತು ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.