ADVERTISEMENT

ವಾರಾಣಸಿ: ರಾಹುಲ್ ವಿಮಾನ ಇಳಿಯಲು ಅವಕಾಶ ನಿರಾಕರಣೆ- ಕಾಂಗ್ರೆಸ್ ಆರೋಪ

ಪಿಟಿಐ
Published 14 ಫೆಬ್ರುವರಿ 2023, 6:07 IST
Last Updated 14 ಫೆಬ್ರುವರಿ 2023, 6:07 IST
   

ವಾರಾಣಸಿ: ಸೋಮವಾರ ತಡರಾತ್ರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಯಾಣಿಸುತ್ತಿದ್ದ ವಿಮಾನವನ್ನು ಲ್ಯಾಂಡ್ ಮಾಡಲು ವಾರಾಣಸಿಯ ವಿಮಾನ ನಿಲ್ದಾಣದ ಅಧಿಕಾರಿಗಳು ಅವಕಾಶ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆದರೆ, ವಿಮಾನ ನಿಲ್ದಾಣದ ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಕೇರಳದ ವಯನಾಡ್‌ನಿಂದ ವಾಪಸ್ ಆಗುತ್ತಿದ್ದ ರಾಹುಲ್ ಗಾಂಧಿಯವರ ವಿಮಾನವು ಬಾಬಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಜಯ್ ರಾಯ್ ಹೇಳಿದ್ದಾರೆ.

ADVERTISEMENT

ನಾನು ಮತ್ತು ನಮ್ಮ ಪಕ್ಷದ ನಾಯಕರು ರಾಹುಲ್ ಗಾಂಧಿಯವರನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದೆವು. ಆದರೆ, ನಮ್ಮ ನಾಯಕರ ವಿಮಾನಕ್ಕೆ ಕೊನೆಯ ಕ್ಷಣದಲ್ಲಿ ಲ್ಯಾಂಡ್ ಆಗಲು ಅವಕಾಶ ನಿರಾಕರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ನಿರ್ದೇಶಕ ಅರ್ಯಾಮಾ ಸನ್ಯಾಲ್, ರಾಹುಲ್ ವಿಮಾನ ಬರುವ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ. ಅಲ್ಲದೆ, ವಿಮಾನದ ಲ್ಯಾಂಡ್‌ಗೆ ಅವಕಾಶ ನೀಡಿಲ್ಲ ಎಂಬ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ.

ರಾಹುಲ್ ಅವರ ವಿಮಾನದ ಲ್ಯಾಂಡ್ ಅನ್ನು ರದ್ದುಪಡಿಸಲಾಗಿದೆ ಎಂದು ಏರ್ ಟ್ರಾಫಿಕ್ ಕಂಟ್ರೋಲರ್ ನಮಗೆ ತಿಳಿಸಿದರು ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ವಾರಾಣಸಿಯಿಂದ ಪ್ರಯಾಗ್ ರಾಜ್‌ಗೆ ತೆರಳಬೇಕಿತ್ತು. ಇಂದು ಅಲ್ಲಿನ ಕಮಲಾ ನೆಹರು ಸ್ಮಾರಕ ಆಸ್ಪತ್ರೆಯ ಕಾರ್ಯಕ್ರಮವೊಂದರಲ್ಲಿ ರಾಹುಲ್ ಭಾಗವಹಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.