ಕೇಂದ್ರ ಸಚಿವ ಸುರೇಶ್ ಗೋಪಿ
ಪಿಟಿಐ ಚಿತ್ರ
ತ್ರಿಶ್ಶೂರ್ (ಕೇರಳ): ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ಕಾಂಗ್ರೆಸ್ ಮತ್ತೆ ಹೊಸದಾಗಿ ಆರೋಪಗಳನ್ನು ಮಾಡಿದ್ದು, 2024ರ ಲೋಕಸಭೆ ಚುನಾವಣೆ ವೇಳೆ ತ್ರಿಶ್ಶೂರ್ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಲು ಅವರು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿದೆ.
ಲೋಕಸಭೆಯ ಮಾಜಿ ಸಂಸದ ಟಿ.ಎನ್. ಪ್ರತಾಪನ್ ನೇತೃತ್ವದ ಕಾಂಗ್ರೆಸ್‌ನ ಹಿರಿಯ ನಾಯಕರ ಗುಂಪು ಸುರೇಶ್ ಗೋಪಿ ವಿರುದ್ಧ ನಗರದ ಪೊಲೀಸ್ ಕಮಿಷನರ್ ಆವರಿಗೆ ದೂರು ನೀಡಿದ್ದು, ಕೇಂದ್ರ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದೆ.
ಕೇರಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿ.ಡಿ. ಸತೀಶನ್ ಇತ್ತಿಚೆಗಷ್ಟೆ ಅವರ ವಿರುದ್ಧ ಮತಗಳವು ಆರೋಪ ಮಾಡಿದ್ದರು. ರಾಜ್ಯದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಕೂಡಾ ಸುರೇಶ್ ಗೋಪಿ ವಿರುದ್ಧ ಅದೇ ಆರೋಪ ಮಾಡಿದ್ದರು.
ದೂರು ಸಲ್ಲಿಸಿ ವರದಿಗಾರರೊಂದಿಗೆ ಮಾತನಾಡಿದ ಪ್ರತಾಪನ್, ‘ಸುರೇಶ್ ಗೋಪಿ ಅವರು ಕ್ಷೇತ್ರದ ಮನೆಯೊಂದರಲ್ಲಿ ಆರು ತಿಂಗಳಿನಿಂದ ನಿರಂತರವಾಗಿ ವಾಸಿಸುತ್ತಿರುವುದಾಗಿ ಅಧಿಕಾರಿಗಳಿಗೆ ಪ್ರಮಾಣಪತ್ರ ಸಲ್ಲಿಸಿದ್ದರು. ಅದರ ಮೂಲಕ ಅವರು ಇಲ್ಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಆದರೆ, ಅವರ ಪ್ರಮಾಣಪತ್ರ ಸಂಪೂರ್ಣ ಸುಳ್ಳಾಗಿದ್ದು, ಅವರು ಹೇಳಿರುವ ನಿರ್ದಿಷ್ಟ ನಿವಾಸದಲ್ಲಿ ಆರು ತಿಂಗಳಿನಿಂದ ವಾಸಿಸುತ್ತಿರಲಿಲ್ಲ. ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾದ ನಂತರ ಬಂದ ಪೂರಕ ಪಟ್ಟಿಯಲ್ಲಿ ಸುರೇಶ್ ಗೋಪಿ ಮತ್ತು ಅವರ ಕುಟುಂಬದ 11 ಸದಸ್ಯರ ಹೆಸರನ್ನು ಸೇರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಸುಳ್ಳು ಪ್ರಮಾಣಪತ್ರದ ಮೂಲಕ ಕ್ಷೇತ್ರದ ಮತದಾರರಾದ ನಂತರ ಅವರು ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಅವರ ಮತ ನಕಲಿ ಮತ್ತು ಅಮಾನ್ಯವಾಗಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಆಯ್ಕೆಯನ್ನು ರದ್ದು ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.