ADVERTISEMENT

ಕಾಂಗ್ರೆಸ್‌ಗೆ ಮತ ಕೇಳುವ ಹಕ್ಕಿಲ್ಲ: ಪ್ರಧಾನಿ ಮೋದಿ ಟೀಕೆ

‘ಭಾರತ್ ಜೋಡೊ ಯಾತ್ರೆ’ಯಲ್ಲಿ ಮೇಧಾ ಪಾಟ್ಕರ್‌ ಭಾಗವಹಿಸಿದ್ದಕ್ಕೆ ಪ್ರಧಾನಿ ಮೋದಿ ಟೀಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2022, 18:43 IST
Last Updated 20 ನವೆಂಬರ್ 2022, 18:43 IST
ಪ್ರಧಾನಿ ನರೇಂದ್ರ ಮೋದಿ ಅವರು ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದರು  – ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದರು  – ಪಿಟಿಐ ಚಿತ್ರ   

ಧೊರಾಜಿ, ವೆರಾವಲ್‌ (ಗುಜರಾತ್‌) (ಪಿಟಿಐ): ಗುಜರಾತ್‌ನಲ್ಲಿ ಮತ ಕೇಳಲು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನೈತಿಕತೆ ಇಲ್ಲ. ನರ್ಮದಾ ಅಣೆಕಟ್ಟು ಯೋಜನೆಯನ್ನು ಮೂರು ದಶಕಗಳಷ್ಟು ವಿಳಂಬ ಮಾಡಿದ ಮಹಿಳೆಯು ‘ಭಾರತ್‌ ಜೋಡೊ ಯಾತ್ರೆ’ಯನ್ನು ಸೇರಿಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರು ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯಲ್ಲಿ ಮಹಾರಾಷ್ಟ್ರದಲ್ಲಿ ಶನಿವಾರ ಭಾಗಿಯಾಗಿದ್ದನ್ನು ಮೋದಿ ಉಲ್ಲೇಖಿಸಿದ್ದಾರೆ. ರಾಜ್‌ಕೋಟ್‌ ಜಿಲ್ಲೆಯ ಧೊರಾಜಿ ಪಟ್ಟಣದಲ್ಲಿ ಮೋದಿ ಅವರು ಭಾನುವಾರ ಚುನಾವಣಾ ಪ್ರಚಾರ ನಡೆಸಿದರು. ನರ್ಮದಾ ನದಿಗೆ ಸರ್ದಾರ್‌ ಸರೋವರ ಅಣೆಕಟ್ಟು ನಿರ್ಮಾಣವು ಹಲವರು ಉಂಟು ಮಾಡಿದ ಅಡಚಣೆಯಿಂದಾಗಿ ಬಹಳ ವಿಳಂಬ ಆಯಿತು ಎಂದು ಅವರು ಹೇಳಿದ್ದಾರೆ.

‘ಬರಡು ಭೂಮಿಯಾಗಿರುವ ಕಛ್‌ ಮತ್ತು ಕಾಥಿಯಾವಾಡದ (ಸೌರಾಷ್ಟ್ರ ಪ್ರದೇಶ) ನೀರಡಿಕೆ ನೀಗಿಸಲು ಇದ್ದ ಏಕೈಕ ಪ‍ರಿಹಾರ ನರ್ಮದಾ ಯೋಜನೆ ಆಗಿತ್ತು. ನರ್ಮದಾ ವಿರೋಧಿ ಕಾರ್ಯಕರ್ತೆಯಾಗಿರುವ ಮಹಿಳೆಯ ಜೊತೆಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ನಡೆಸಿದ್ದನ್ನು ನೀವು ನೋಡಿದ್ದೀರಿ’ ಎಂದು ಮೋದಿ ಹೇಳಿದ್ದಾರೆ.

ADVERTISEMENT

‘ಇಲ್ಲಿಗೆ ನೀರು ಬಾರದಂತೆ ಮಾಡಲು ಈ ಕಾರ್ಯಕರ್ತರು ಪ್ರತಿಭಟನೆ ಮಾಡಿದರು’ ಎಂದ ಮೋದಿ ಅವರು, ಈ ಕಾರ್ಯಕರ್ತರು ಗುಜರಾತ್‌ ಕುರಿತು ಎಷ್ಟು ಅಪಖ್ಯಾತಿ ಹರಡಿದ್ದರೆಂದರೆ ವಿಶ್ವ ಬ್ಯಾಂಕ್ ಕೂಡ ಯೋಜನೆಗೆ ಹಣಕಾಸು ನೆರವನ್ನು ನಿಲ್ಲಿಸಿತು ಎಂದಿದ್ದಾರೆ.

‘ಕಾಂಗ್ರೆಸ್‌ ನಾಯಕರು ಮತ ಕೇಳಲು ಬಂದಾಗ, ಯಾವ ನೈತಿಕತೆಯ ಮೇಲೆ ಮತ ಕೇಳುತ್ತಿದ್ದೀರಿ ಎಂಬುದನ್ನು ವಿವರಿಸುವಂತೆ ಅವರನ್ನು ನೀವು ಕೇಳಬೇಕು ಎಂದು ನಾನು ಬಯಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.