ADVERTISEMENT

ದೇವರಿಯಾ: ಕಾರ್ಯಕರ್ತೆ ಮೇಲೆ ಕಾಂಗ್ರೆಸ್‌ನವರಿಂದಲೇ ಹಲ್ಲೆ

ಉಪಚುನಾವಣೆ: ಅತ್ಯಾಚಾರಿಗೆ ಟಿಕೆಟ್‌ ನೀಡಲಾಗಿದೆ ಎಂಬ ಆರೋಪಕ್ಕೆ ಆಕ್ರೋಶ

ಪಿಟಿಐ
Published 11 ಅಕ್ಟೋಬರ್ 2020, 11:49 IST
Last Updated 11 ಅಕ್ಟೋಬರ್ 2020, 11:49 IST
ವಿಡಿಯೊ ದೃಶ್ಯ
ವಿಡಿಯೊ ದೃಶ್ಯ    

ದೇವರಿಯಾ, ಉತ್ತರ ಪ್ರದೇಶ: ಅತ್ಯಾಚಾರ ನಡೆಸಿದ ವ್ಯಕ್ತಿಗೆ ದೇವರಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್‌ ನೀಡಲಾಗಿದೆ ಎಂದು ಆರೋಪಿಸಿದ ಪಕ್ಷದ ಕಾರ್ಯಕರ್ತೆ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಉಪಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಆಯೋಜಿಸಿದ್ದ ಪಕ್ಷದ ಸಭೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪಕ್ಷದ ಕಾರ್ಯಕರ್ತೆ ತಾರಾ ಯಾದವ ಎಂಬುವವರು ಹಲ್ಲೆಗೆ ಒಳಗಾದವರು. ಹಲ್ಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಘಟನೆ ಸಂಬಂಧ ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿಯೊಂದನ್ನು ರಚಿಸಿದ್ದು ಮೂರು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಅಲ್ಲದೆ ಇಬ್ಬರು ಕಾರ್ಯಕರ್ತರನ್ನು ಅಮಾನತು ಮಾಡಲಾಗಿದೆ.

ADVERTISEMENT

ತಾರಾ ಅವರು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ನಾಲ್ವರು ಪದಾಧಿಕಾರಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ದೂರಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಈ ಕುರಿತು ತನಿಖೆ ನಡೆದಿದೆ‘ ಎಂದು ಪೊಲೀಸ್‌ ಅಧಿಕಾರಿ ಕೊತ್ವಾಲಿ ಚಂದ್ರಭಾನ್‌ ಸಿಂಗ್‌ ತಿಳಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯುವ ಉಪಚುನಾವಣೆಗೆ ಮುಕುಂದ ಭಾಸ್ಕರ್‌ ಮಣಿ ಎಂಬುವವರಿಗೆ ಟಿಕೆಟ್‌ ನೀಡಲಾಗಿದೆ. ತಮ್ಮ ವಿರುದ್ಧದ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.

‘ಅತ್ಯಾಚಾರ ಎಸಗಿದ ಆರೋಪಿಗೆ ನೀವು ಟಿಕೆಟ್‌ ನೀಡಿದ್ದೀರಿ. ಇದರಿಂದ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆಯಾಗಿದೆ. ಇವರ ಬದಲು ಒಬ್ಬ ಸಾಮಾನ್ಯ ವ್ಯಕ್ತಿಗೆ ಟಿಕೆಟ್‌ ನೀಡಬಹುದಾಗಿತ್ತು’ ಎಂದು ನಾನು ಹೇಳಿದೆ. ಇಷ್ಟು ಹೇಳಿದ್ದೆ ತಡ ನನ್ನನ್ನು ಕೆಲವರು ನೂಕಿದರು. ನಂತರ ಹಲ್ಲೆ ನಡೆಸಿದರು’ ಎಂದು ತಾರಾ ಯಾದವ ಹೇಳಿದ್ದಾರೆ.

‘ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲೂ ನನಗೆ ಅವಕಾಶ ಇಲ್ಲವೇ’ ಎಂದು ಪ್ರಶ್ನಿಸಿರುವ ಅವರು, ‘ಇಂಥ ವ್ಯಕ್ತಿಗಳು ಕಾಂಗ್ರೆಸ್‌ಅನ್ನು ನಾಶಪಡಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಘಟನೆಯ ಪ್ರತ್ಯಕ್ಷದರ್ಶಿಗಳು ಎನ್ನಲಾದ ಕೆಲವರು, ‘ತಾರಾ ಯಾದವ ಅವರು ಪಕ್ಷದ ಕಾರ್ಯದರ್ಶಿ ಸಚಿನ್‌ ನಾಯ್ಕ್‌ ಮೇಲೆ ಹಲ್ಲೆ ನಡೆಸಲು ಮುಂದಾದರು. ಅವರತ್ತ ಹೂಗುಚ್ಛವನ್ನೂ ಎಸೆದರು’ ಎಂದು ಹೇಳಿದ್ದಾರೆ.

‘ಈ ಘಟನೆಯಿಂದ ಆಕ್ರೋಶಗೊಂಡ ಪಕ್ಷದ ಕೆಲವು ಕಾರ್ಯಕರ್ತರು ತಾರಾ ಯಾದವ ಮೇಲೆ ಹಲ್ಲೆ ನಡೆಸಿ, ಅವರನ್ನು ಸಭೆಯಿಂದ ಹೊರ ಹಾಕಿದರು’ ಎಂದೂ ಇದೇ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.