
ನವದೆಹಲಿ: ‘ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಧ್ವನಿ ಮತ್ತು ಹಕ್ಕುಗಳನ್ನು ರಕ್ಷಿಸುವ ಗುರಾಣಿಯಾಗಿದೆ. ಹೀಗಾಗಿ ಭಾರತದ ಸಂವಿಧಾನವನ್ನು ರಕ್ಷಿಸುವ ನಮ್ಮ ಸಂಕಲ್ಪವು ಬಂಡೆಯಂತೆ ಬಲಿಷ್ಠವಾಗಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
‘ನಮ್ಮ ಗಣರಾಜ್ಯವು ಈ ಬಲವಾದ ಅಡಿಪಾಯದ ಮೇಲೆ ನಿಂತಿದ್ದು, ಅದು ಸಮಾನತೆ ಮತ್ತು ಸಾಮರಸ್ಯದ ಮೂಲಕ ಬಲಗೊಳ್ಳುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸಂವಿಧಾನವನ್ನು ರಕ್ಷಿಸುವುದು ಎಂದರೆ ಭಾರತೀಯ ಗಣರಾಜ್ಯವನ್ನು ರಕ್ಷಿಸುವುದು ಎಂದರ್ಥ. ಇದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಕ್ಕೆ ಅರ್ಪಿಸುವ ನಿಜವಾದ ಗೌರವ. ಜೈ ಹಿಂದ್, ಜೈ ಸಂವಿಧಾನ್’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ನಮ್ಮ ಸಂವಿಧಾನದ ತತ್ವಗಳು ಮತ್ತು ಚೈತನ್ಯವನ್ನು ರಕ್ಷಿಸುವಲ್ಲಿ ದೃಢವಾಗಿ ನಿಲ್ಲುವ ಅಗತ್ಯ ಇಂದಿದೆ. ಸಂವಿಧಾನ ರಚನಕಾರರು ನಮಗೆ ನೀಡಿರುವ ಶಾಶ್ವತ ಮೌಲ್ಯಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ನಾವು ಎಲ್ಲ ತ್ಯಾಗಕ್ಕೂ ಸಿದ್ಧರಿರಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದ ಜನರಿಗೆ ಶುಭ ಕೋರಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಇಂದು ನಮ್ಮ ಸಂವಿಧಾನ ಜಾರಿಗೆ ಬಂದ ದಿನದ ಸ್ಮರಣೆ. ಭಾರತದ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಸಹೋದರೆಯ ಮೌಲ್ಯಗಳನ್ನು ಸಂವಿಧಾನ ಖಾತರಿಪಡಿಸಿದೆ. ಸಂವಿಧಾನ ಚಿರಾಯುವಾಗಲಿ, ಜೈ ಹಿಂದ್’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.