ADVERTISEMENT

ವರ್ಚುವಲ್‌ ಕಲಾಪ ಮುಂದುವರಿಕೆಯಿಂದ ಸಮಸ್ಯೆ: ಸುಪ್ರೀಂ ಕೋರ್ಟ್

ಪಿಟಿಐ
Published 8 ನವೆಂಬರ್ 2021, 9:12 IST
Last Updated 8 ನವೆಂಬರ್ 2021, 9:12 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ವರ್ಚುವಲ್‌ ಸ್ವರೂಪದಲ್ಲಿಯೇ ಕಲಾಪ ನಡೆಸುವುದನ್ನು ಕೋರ್ಟ್‌ಗಳು ಮುಂದುವರಿಸಿದರೆ ಸಮಸ್ಯೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿತು.

‘ವರ್ಚುವಲ್‌ ಸ್ವರೂಪದ ಕೋರ್ಟ್‌ನ ಕಲಾಪಗಳು ಕಕ್ಷಿದಾರರ ಮೂಲಭೂತ ಹಕ್ಕು’ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಲೂ ಸುಪ್ರೀಂ ಕೋರ್ಟ್ ನಿರಾಕರಿಸಿತು.

ವರ್ಚುವಲ್‌ ಸ್ವರೂಪದಲ್ಲಿ ಕಲಾಪಕ್ಕೆ ವಿವಿಧ ಸಮಸ್ಯೆಗಳಿವೆ. ಡಿಸೆಂಬರ್‌ನಲ್ಲಿ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಬಿ.ಆರ್‌.ಗವಾಯ್‌ ಅವರಿದ್ದ ಪೀಠವು ತಿಳಿಸಿತು.

ADVERTISEMENT

ಈ ಹಿಂದೆ ಸಾಮಾನ್ಯ ದಿನಗಳಲ್ಲಿ 60–65 ಪ್ರಕರಣಗಳನ್ನು ಪರಿಗಣಿಸುತ್ತಿದ್ದೆವು. ಒಂದು ವರ್ಷದ ಅನುಭವದ ನಂತರವೂ ಈಗ 30–35 ಪ್ರಕರಣಗಳನ್ನಷ್ಟೇ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿದೆಎಂದೂ ಪೀಠವು ಹೇಳಿತು.

‘ಜರ್ನೇಲ್‌ ಸಿಂಗ್‌ (ಬಡ್ತಿಯಲ್ಲಿ ಮೀಸಲಾತಿ) ಪ್ರಕರಣದಲ್ಲಿ ಹಿರಿಯ ವಕೀಲರು ವ್ಯಕ್ತಿಗತವಾಗಿ ಹಾಜರಾಗಿದ್ದಾರೆ. ಭೌತಿಕವಾಗಿ ವಾದ ಮಂಡನೆ ಖುಷಿ ನೀಡಲಿದೆ ಎಂದೂ ವಕೀಲರು ತಿಳಿಸಿದ್ದಾರೆ. ಈಗಷ್ಟೇ ಕೋರ್ಟ್ ಕಲಾಪ ಸಹಜ ಸ್ಥಿತಿಗೆ ಮರಳುತ್ತಿದೆ. ಮೊದಲು ಪೂರ್ಣ ಆರಂಭವಾಗಲಿ. ನಂತರ ಈ ಅರ್ಜಿಯ ವಿಚಾರಣೆ ನಡೆಸೋಣ’ ಎಂದಿತು.

ನ್ಯಾಯದಾನ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದರಿಂದ ಈ ಅರ್ಜಿಯ ತುರ್ತು ವಿಚಾರಣೆಯನ್ನು ಬಯಸಲಾಗಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ ಲುಥಾರಾ ಹೇಳಿದರು. ‘ಕಕ್ಷಿದಾರ ಎಲ್ಲಿ ಬೇಕಾದರೂ ಕುಳಿತು, ವಿಚಾರಣೆ ಏನಾಗುತ್ತಿದೆ ಎಂದು ಗಮನಿಸಬಹುದಾಗಿದೆ’ ಎಂದು ತಮ್ಮ ಮಾತಿಗೆ ಸಮರ್ಥನೆ ನೀಡಿದರು.

ಇದಕ್ಕೆ ಸುಪ್ರೀಂ ಕೋರ್ಟ್‌, 70 ವರ್ಷಗಳಲ್ಲಿ ಯಾವುದೇ ದೂರು ಇಲ್ಲದೆ ನ್ಯಾಯ ಪಡೆಯಲಾಗಿದೆ. ಈಗ ಮಾತ್ರ ಭೌತಿಕ ವಿಚಾರಣೆ ಕುರಿತಂತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಪ್ರತಿಕ್ರಿಯಿಸಿತು.

ಈ ಹಿಂದೆಯೂ ಸುಪ್ರೀಂ ಕೋರ್ಟ್‌, ನ್ಯಾಯಾಲಯ ಕಲಾಪಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಬೇಕು. ಎಲ್ಲ ನಾಗರಿಕರೂ ನ್ಯಾಯವನ್ನು ಪಡೆಯುವ ವಾತಾವರಣ ಇರಬೇಕು ಎಂದು ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.