ಚೆನ್ನೈ: ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 14ರಂದು ನಿಗದಿಯಾಗಿದ್ದ ‘ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಹೇಗೆ ಪಸರಿಸುವುದು’ ಕುರಿತ ವಿವಾದಿತ ಉಪನ್ಯಾಸವನ್ನು ಎಬಿವಿಪಿ, ಹಿಂದೂ ಸಂಘಟನೆಗಳ ವ್ಯಾಪಕ ಆಕ್ರೋಶದ ಕಾರಣಕ್ಕೆ ರದ್ದುಪಡಿಸಲಾಗಿದೆ.
ಸರ್ ಎಸ್. ಸುಬ್ರಮಣ್ಯ ಅಯ್ಯರ್ ದತ್ತಿ ಉಪನ್ಯಾಸದಲ್ಲಿ ಹೈದರಾಬಾದ್‌ನ ಮುಖ್ಯ ಎಂಜಿನಿಯರ್ ಕೆ. ಶಿವಕುಮಾರ್ ಅವರು ‘ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಹೇಗೆ ಹರಡುವುದು’ ಮತ್ತು ‘ಈ ಮಾರ್ಗವು ಏಕೆ ಬೇಕು’ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಮದ್ರಾಸ್ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗವು ಪ್ರಕಟಣೆ ಹೊರಡಿಸಿತ್ತು.
ಇಂತಹ ಉಪನ್ಯಾಸ ಆಯೋಜಿಸಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲೂ ತೀವ್ರ ಆಕ್ರೋಶ ಮತ್ತು ಟೀಕೆ ವ್ಯಕ್ತವಾಗಿತ್ತು. ‘ಮದ್ರಾಸ್ ವಿಶ್ವವಿದ್ಯಾನಿಲಯವು ಜ್ಞಾನ ದೇಗುಲವನ್ನು ಕ್ರೈಸ್ತ ಧರ್ಮದ ಪ್ರಚಾರ ವಾಹಕವಾಗಿ ಪರಿವರ್ತಿಸಿದೆ’ ಎಂದು ಆರೋಪಿಸಿ ಹಲವು ಮಂದಿ ‘ಎಕ್ಸ್’ ಮಾಡಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ. ಸೂರ್ಯ, ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದರು. ಉಪನ್ಯಾಸವು ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಅರಿತ ವಿವಿಯು ಕಾರ್ಯಕ್ರಮವನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ.
‘ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗವು ಈ ವಿಷಯಗಳ ಬಗ್ಗೆ ದತ್ತಿ ಉಪನ್ಯಾಸ ನಡೆಸಲು ಮದ್ರಾಸ್ ವಿಶ್ವವಿದ್ಯಾಲಯದಿಂದ ಅನುಮೋದನೆ ಪಡೆದಿಲ್ಲ. ಹೀಗಾಗಿ, ದತ್ತಿ ಉಪನ್ಯಾಸ ರದ್ದುಗೊಳಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ’ ಎಂದು ವಿವಿಯ ರಿಜಿಸ್ಟ್ರಾರ್ ಪ್ರೊ.ಎಸ್. ಏಳುಮಲೈ ಅವರು ಮಾರ್ಚ್ 7ರಂದು ರಾಜಭವನಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.