ADVERTISEMENT

ಕೋವಿಡ್‌–19: ರಾಜ್ಯಕ್ಕೆ ಅಗತ್ಯ ನೆರವು– ಜೆ.ಪಿ.ನಡ್ಡಾ

ಸರ್ಕಾರದಿಂದ ಮಾಹಿತಿ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 12:07 IST
Last Updated 28 ಮಾರ್ಚ್ 2020, 12:07 IST
   

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಅಗತ್ಯವಾದ ಎಲ್ಲ ನೆರವು ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.‍ಪಿ. ನಡ್ಡಾ ಭರವಸೆ ನೀಡಿದರು.

ಕೊರೊನಾ ಚಿಕಿತ್ಸೆ ಮತ್ತು ಸೋಂಕು ಹರಡದಂತೆ ತಡೆಯಲು ಸರ್ಕಾರ ಈವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಂದ ಶನಿವಾರ ಅವರು ಮಾಹಿತಿ ಪಡೆದರು.

ಕೊರೊನಾ ಟೆಸ್ಟ್ ಕಿಟ್, ಪರ್ಸನಲ್‌ ಪ್ರೊಟೆಕ್ಟೀವ್‌ ಎಕ್ವಿಪ್ಮೆಂಟ್‌ (ಪಿಪಿಇ), ಎನ್‌- 95 ಮಾಸ್ಕ್‌, ವೆಂಟಿಲೇಟರ್‌ ಮತ್ತಿತರ ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದ್ದು, ಅವುಗಳ ಪೂರೈಕೆಗೆ ನೆರವಾಗುವಂತೆ ಸಚಿವರು ಮಾಡಿದ ಮನವಿಗೆ ನಡ್ಡಾ ಸಕಾರಾತ್ಮಕವಾಗಿ ಸ್ಪಂದಿಸಿದರು.

ADVERTISEMENT

‘ಕಾರ್ಮಿಕರು, ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು ವಲಸೆ ಹೋಗದಂತೆ ತಡೆಯಬೇಕು. ಇರುವಲ್ಲೇ ಅವರಿಗೆ ಎಲ್ಲ ಸೌಲಭ್ಯ ಕಲ್ಪಿಸಬೇಕು. ಚಿಕಿತ್ಸೆ, ನಿಯಂತ್ರಣ ಹಾಗೂ ಇತರ ಸೌಲಭ್ಯ ಕಲ್ಪಿಸಲು ಎಲ್ಲ ಇಲಾಖೆಗಳ ಸಹಕಾರ ಮತ್ತು ಪರಸ್ಪರ ಸಂವಹನ ಇರಬೇಕು. ಕೇಂದ್ರ ಆರೋಗ್ಯ ಸಚಿವಾಲಯದ ಜತೆ ಸಂಪರ್ಕದಲ್ಲಿದ್ದು ಸಲಹೆ, ನೆರವು ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

‘ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ. ಆರೋಗ್ಯ ಸಿಬ್ಬಂದಿಗೆ ಆನ್‌ಲೈನ್‌ ತರಬೇತಿ ನೀಡಲಾಗುತ್ತಿದೆ. ವೆಂಟಿಲೇಟರ್‌ ಮತ್ತು ತುರ್ತು ನಿಗಾ ಘಟಕಗಳ ನಿರ್ವಹಣೆಗೆ ತಾಂತ್ರಿಕ ತರಬೇತಿ ನೀಡಲಾಗಿದೆ. ವೈದ್ಯರು ಸೇರಿ 27 ಸಾವಿರ ಆರೋಗ್ಯ ಸಿಬ್ಬಂದಿ ತುರ್ತು ಸೇವೆಗೆ ಸಜ್ಜಾಗಿದ್ದಾರೆ. ಕೊರೊನಾ ಚಿಕಿತ್ಸೆಗೆ ರಾಜ್ಯದಲ್ಲಿ 1,300 ಹಾಸಿಗೆಯ ಆಸ್ಪತ್ರೆ ಸಿದ್ಧವಾಗಿದೆ‘ ಎಂದು ನಡ್ಡಾ ಅವರಿಗೆ ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

‘‍ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪ್ರಮುಖ ಪ್ರದೇಶಗಳನ್ನು ಸೋಂಕುರಹಿತವಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಬ್ಲೀಚಿಂಗ್‌ ಪೌಡರ್‌ ನೀರಿನೊಂದಿಗೆ ಬೆರೆಸಿ ಸಿಂಪಡಿಸಲಾಗುತ್ತಿದೆ. ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿ, ಊಟದ ವ್ಯವಸ್ಥೆ ಮಾಡಲಾಗಿದೆ. ಟೆಲಿ ಕನ್ಸಲ್ಟೆನ್ಸಿ ಆರಂಭಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಂಡಿರುವ ಜತೆಗೆ ಸೋಂಕಿತರ ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ‘ ಎಂದೂ ವಿವರಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸ್ಕೈಪ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ನಡ್ಡಾ ಅವರು ಇಬ್ಬರು ಸಚಿವರ ಜೊತೆ ಸಂವಾದ ನಡೆಸಿದರು. ಸಚಿವರಾದ ಆರ್‌. ಅಶೋಕ್‌, ಗೋಪಾಲಯ್ಯ, ಭೈರತಿ ಬಸವರಾಜ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್, ಶಾಸಕ ಅರವಿಂದ ಲಿಂಬಾವಳಿ, ಸತೀಶ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.