ADVERTISEMENT

100 ಕೋಟಿ ಡೋಸ್ ಕೋವಿಡ್‌ ಲಸಿಕೆ: ಬಲವಾದ ರಕ್ಷಾ ಕವಚ ಎಂದ ಪ್ರಧಾನಿ ಮೋದಿ  

100 ಕೋಟಿ ಕೋವಿಡ್‌ ಲಸಿಕೆಯ ಡೋಸ್‌ ಪೂರೈಕೆ

ಪಿಟಿಐ
Published 21 ಅಕ್ಟೋಬರ್ 2021, 8:24 IST
Last Updated 21 ಅಕ್ಟೋಬರ್ 2021, 8:24 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕಳೆದ 100 ವರ್ಷಗಳಲ್ಲಿನ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶವು ಈಗ 100 ಕೋಟಿಡೋಸ್‌ ಲಸಿಕೆಯ ಬಲವಾದ ‘ರಕ್ಷಾ ಕವಚ’ವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ಏಮ್ಸ್‌ ಆವರಣದಲ್ಲಿನ ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯಲ್ಲಿ (ಎನ್‌ಸಿಐ) ಇನ್ಫೋಸಿಸ್ ಫೌಂಡೇಷನ್‌ ಸ್ಥಾಪಿಸಿದ ವಿಶ್ರಾಮ ಸದನವನ್ನು ಉದ್ಘಾಟಿಸಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು,ದೇಶದಲ್ಲಿ ನೀಡುತ್ತಿರುವ ಕೋವಿಡ್‌ ಲಸಿಕೆಯ ಡೋಸ್‌ಗಳು ಗುರುವಾರ 100 ಕೋಟಿ ದಾಟಿದ್ದುಲಸಿಕಾ ಕಾರ್ಯಕ್ರಮದಲ್ಲಿ ಭಾರತವು ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಿದೆ ಎಂದರು.

2021ರ ಅಕ್ಟೋಬರ್‌ 21 ಇತಿಹಾಸದಲ್ಲಿ ದಾಖಲಾಗಿದೆ.ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಈ ಶ್ರೇಯ ಸಲ್ಲುತ್ತದೆ ಎಂದ ಅವರು, ದೇಶದ ಎಲ್ಲಾ ಲಸಿಕಾ ಉತ್ಪಾದನಾ ಕಂಪನಿಗಳು, ಲಸಿಕೆ ಸಾಗಣೆಯಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಲಸಿಕೆಗಳನ್ನು ನಿರ್ವಹಿಸುವ ಆರೋಗ್ಯ ವಲಯದ ವೃತ್ತಿಪರರಿಗೆ ಕೃತಜ್ಞತೆ ಸಲ್ಲಿಸಿದರು.

ADVERTISEMENT

ಭಾರತದ ಕಾರ್ಪೊರೇಟ್‌ ವಲಯ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಸ್ಥೆಗಳು ದೇಶದ ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಿವೆ ಎಂದರು.

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಹೊಂದುವ ನಮ್ಮ ಪ್ರಯತ್ನಗಳಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಅವರು ಹೇಳಿದರು.

ಇನ್ಫೋಸಿಸ್ ಫೌಂಡೇಷನ್‌ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯ ಭಾಗವಾಗಿ 806 ಹಾಸಿಗೆಗಳ ವಿಶ್ರಾಮ ಸದನವನ್ನು ನಿರ್ಮಿಸಿದೆ.

ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.