ನವದೆಹಲಿ: ಉನ್ನಾವೊ ಆತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಘಾತಕ್ಕೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತು ಇತರ ಐವರನ್ನು ದೆಹಲಿಯ ನ್ಯಾಯಾಲಯ ಖುಲಾಸೆಗೊಳಿಸಿದೆ.
ಆರೋಪಿಗಳ ವಿರುದ್ಧ ಪ್ರಾಥಮಿಕವಾಗಿ ಯಾವುದೇ ಪುರಾವೆಗಳಿಲ್ಲದ ಕಾರಣ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಕುಲದೀಪ್ ಸಿಂಗ್, ಕೋಮಲ್ ಸಿಂಗ್, ಅರುಣ್ ಸಿಂಗ್, ಗ್ಯಾನೇಂದ್ರ ಸಿಂಗ್, ರಿಂಕು ಸಿಂಗ್ ಮತ್ತು ಅವದೇಶ್ ಸಿಂಗ್‌ರನ್ನು ಖುಲಾಸೆಗೊಳಿಸಿದ್ದಾರೆ.
ಇತರ ಆರೋಪಿಗಾದ ಆಶಿಷ್ ಕುಮಾರ್ ಪಾಲ್, ವಿನೋದ್ ಮಿಶ್ರಾ, ಹರಿಪಾಲ್ ಸಿಂಗ್ ಮತ್ತು ನವೀನ್ ಸಿಂಗ್ ವಿರುದ್ಧ ಪ್ರಾಥಮಿಕ ಹಂತದ ಸಾಕ್ಷ್ಯಾಧಾರಗಳಿರುವುದರಿಂದ, ಅವರ ವಿರುದ್ಧ ಆರೋಪ ಹೊರಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಇತರ ಆರೋಪಿಗಳ ಜೊತೆ ಸೇರಿ ಕುಲದೀಪ್ ಸಿಂಗ್ ಪಿತೂರಿ ನಡೆಸಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿಲ್ಲ ಎಂದೂ ನ್ಯಾಯಾಲಯ ಸೋಮವಾರ ಆದೇಶದಲ್ಲಿ ತಿಳಿಸಿದೆ.
2019ರಲ್ಲಿ ಉನ್ನಾವೊ ಅತ್ಯಾಚಾರ ಪ್ರರಕಣದ ಸಂತ್ರಸ್ತೆ ಇಬ್ಬರು ಸಂಬಂಧಿಕರು ಹಾಗೂ ವಕೀಲರ ಜೊತೆ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಸಂತ್ರೆಸ್ತೆಯ ಇಬ್ಬರು ಸಂಬಂಧಿಕರು ಮೃತಪಟ್ಟಿದ್ದರು. ಸಂತ್ರಸ್ತೆ ಹಾಗೂ ವಕೀಲರು ತೀವ್ರವಾಗಿ ಗಾಯಗೊಂಡಿದ್ದರು.
ಸಂತ್ರಸ್ತೆ ಹಾಗೂ ಕುಟುಂಬದವರಿಗೆ ಬೆದರಿಕೆಯೊಡ್ಡಲಾಗಿತ್ತು ಎಂದು ಆರೋಪಿಸಿದ್ದ ಸಂದರ್ಭದಲ್ಲಿ ಕಲದೀಪ್ ಸಿಂಗ್ ನ್ಯಾಯಾಂಗ ಬಂಧನದಲ್ಲಿದ್ದರು ಎಂಬುದನ್ನೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.