ADVERTISEMENT

ರಕ್ಷಣಾ ಸಿಬ್ಬಂದಿಗೆ ವಂಚನೆ: ನಿವೃತ್ತ ಸೇನಾಧಿಕಾರಿ ಸೇರಿ ಇಬ್ಬರಿಗೆ 5 ವರ್ಷ ಜೈಲು

ಪಿಟಿಐ
Published 28 ಆಗಸ್ಟ್ 2021, 7:35 IST
Last Updated 28 ಆಗಸ್ಟ್ 2021, 7:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಟಕ್‌: ರಕ್ಷಣಾ ಸಿಬ್ಬಂದಿಗೆ ವಂಚಿಸಿದ ಪ್ರಕರಣದಡಿ ನಿವೃತ್ತ ಸೇನಾಧಿಕಾರಿ ಸೇರಿದಂತೆ ಇಬ್ಬರಿಗೆ ಒಡಿಶಾ ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ (ಒಪಿಐಡಿ) ಸಂಬಂಧಿಸಿದ ನ್ಯಾಯಾಲಯವು ಶುಕ್ರವಾರ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸೈನಿಕ ಕಲ್ಯಾಣ ಸಂಸ್ಥೆಯ ಮುಖ್ಯಸ್ಥ, ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ರಾಕೇಶ್‌ ರಾಣಾ ಮತ್ತು ಬ್ರೂಕ್‌ಸನ್‌ ಇನ್ಫ್ರಾ ಪ್ರೈವೆಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪೂರ್ಣ ಚಂದ್ರ ಪಾಂಡಾಗೆ ನ್ಯಾಯಾಲಯವು 5 ವರ್ಷಗಳ ಶಿಕ್ಷೆ ವಿಧಿಸಿದೆ. ಅದರೊಂದಿಗೆ ಅವರಿಬ್ಬರಿಗೆ ತಲಾ ₹1ಲಕ್ಷ ದಂಡ ಕಟ್ಟುವಂತೆ ಸೂಚಿಸಿದೆ. ಜತೆಗೆ, ಕಂಪನಿಗೂ ₹2 ಲಕ್ಷ ದಂಡ ವಿಧಿಸಿದೆ.

ಹಲವು ರಕ್ಷಣಾ ಸಿಬ್ಬಂದಿಗೆನಿವೇಶನ ಭೂಮಿ ಕೊಡಿಸುವುದಾಗಿ ನಂಬಿಸಿ ಅವರಿಂದ ₹29 ಕೋಟಿ ಮೊತ್ತವನ್ನು ರಾಣಾ ಮತ್ತು ಪಾಂಡಾ ಸಂಗ್ರಹಿಸಿದ್ದರು. ಆದರೆ ರಕ್ಷಣಾ ಸಿಬ್ಬಂದಿಗೆ ಭೂಮಿ ಕೊಡಿಸಲು ಅವರಿಂದ ಸಾಧ್ಯವಾಗಿಲ್ಲ. ಅಲ್ಲದೆ ಅವರ ಹಣವನ್ನು ಹಿಂತಿರುಗಿಸಿಲ್ಲ. ಈ ಹಿನ್ನೆಲೆಯಲ್ಲಿ ವಂಚನೆಗೊಳಗಾದ ಇಬ್ಬರು ರಕ್ಷಣಾ ಸಿಬ್ಬಂದಿ ಒಡಿಶಾ ಪೊಲೀಸ್‌ ಪಡೆಯ ಆರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲ್ಯು) ದೂರು ಸಲ್ಲಿಸಿದ್ದರು.

ADVERTISEMENT

ದೂರಿನ ಆಧಾರದ ಮೇಲೆ ರಾಣಾ ಮತ್ತು ಪಾಂಡಾ ವಿರುದ್ಧ ಒಪಿಐಡಿ ಕಾಯ್ದೆಯಡಿ ಆರ್ಥಿಕ ಅಪರಾಧ ವಿಭಾಗವು ಪ್ರಕರಣ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.