ADVERTISEMENT

ರೋಗನಿರೋಧಕ ಶಕ್ತಿ ಹೆಚ್ಚಿಸುವ ಬಿಸಿಜಿ ಲಸಿಕೆ: ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 18:04 IST
Last Updated 28 ಅಕ್ಟೋಬರ್ 2020, 18:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕ್ಷಯರೋಗಕ್ಕೆ ನೂರು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ್ದ ಲಸಿಕೆಯಾದ ‘ಬಿಸಿಜಿ’ಯು, ಭಾರತದಲ್ಲಿನ ಹಿರಿಯರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದೆ. ಈ ಮೂಲಕ ಕೋವಿಡ್‌–19 ವಿರುದ್ಧ ದೇಹದ ಆಂತರಿಕ ರೋಗನಿರೋಧಕ ಸಾಮರ್ಥ್ಯವು ಹೆಚ್ಚಳವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎಂಆರ್‌) ಸಂಶೋಧನೆಯೊಂದು ಉಲ್ಲೇಖಿಸಿದೆ.

‘ಹಿರಿಯರ ಮೇಲೆ ನಡೆಸಲಾದ ಬಿಸಿಜಿ ಲಸಿಕೆ ಪ್ರಯೋಗವು ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದ ಪ್ರಾಥಮಿಕ ಫಲಿತಾಂಶದಲ್ಲಿ ತಿಳಿದುಬಂದಿದೆ’ ಎಂದು ಐಸಿಎಂಆರ್‌ ಅಧ್ಯಯನ ತಿಳಿಸಿದೆ. 60 ವರ್ಷ ಮೇಲ್ಪಟ್ಟ ಜನರಿಗೆ ಬಿಸಿಜಿ ಲಸಿಕೆ ನೀಡಿದರೆ ಕೋವಿಡ್‌–19ನಿಂದ ಅವರನ್ನು ರಕ್ಷಿಸಬಹುದೇ ಎನ್ನುವುದನ್ನು ಪರೀಕ್ಷಿಸಲು ಐಸಿಎಂಆರ್‌ ಈ ಅಧ್ಯಯನ ನಡೆಸುತ್ತಿದೆ.

ಪ್ರಯೋಗದ ಭಾಗವಾಗಿ ಕ್ಷಯರೋಗ ಸಂಶೋಧನೆ ರಾಷ್ಟ್ರೀಯ ಸಂಸ್ಥೆಯು 60–80 ವರ್ಷದ 54 ಜನರಿಗೆ ಈ ಲಸಿಕೆಯನ್ನು ನೀಡಿತ್ತು. ಇವರ ರೋಗನಿರೋಧಕ ಪ್ರಮಾಣವನ್ನು ಲಸಿಕೆ ಪಡೆಯದ 32 ಜನರ ರೋಗನಿರೋಧಕ ಪ್ರಮಾಣದ ಜೊತೆ ಹೋಲಿಕೆ ಮಾಡಲಾಗಿತ್ತು. ಒಂದು ತಿಂಗಳು ಇವರ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು. ಈ ಲಸಿಕೆಯು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇದು ಹಿರಿಯರಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ.

ADVERTISEMENT

ಬಿಸಿಜೆ ಲಸಿಕೆಯಿಂದ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿಯು ಕೋವಿಡ್‌–19 ವಿರುದ್ಧ ನೇರವಾಗಿ ಪರಿಣಾಮ ಬೀರುತ್ತದೆಯೇ ಎನ್ನುವುದು ಹೆಚ್ಚಿನ ಅಧ್ಯಯನದಿಂದಷ್ಟೇ ತಿಳಿಯಬೇಕಾಗಿದೆ. ಈ ಪ್ರಯೋಗವು ದೇಶದ ಆರು ಕೇಂದ್ರಗಳಲ್ಲಿ ನಡೆಯಲಿದ್ದು, 60 ವರ್ಷ ಮೇಲ್ಪಟ್ಟ ಆರೋಗ್ಯವಂತ 1,600ಕ್ಕೂ ಅಧಿಕ ಜನರು ಈ ಲಸಿಕೆ ಪಡೆಯಲಿದ್ದಾರೆ. ಇದರ ಫಲಿತಾಂಶ ಮುಂದಿನ ವರ್ಷ ಲಭ್ಯವಾಗಲಿದೆ ಎಂದು ಐಸಿಎಂಆರ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.