ಠಾಣೆ: ಮಹಾರಾಷ್ಟ್ರದ ಪುಣೆಯಲ್ಲಿ ಕೋವಿಡ್‌ನಿಂದಾಗಿ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಹೊಸದಾಗಿ 8 ಮಂದಿಯಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಠಾಣೆ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ಇದರೊಂದಿಗೆ ನಗರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಮೃತ ವ್ಯಕ್ತಿಯು 21 ವಯಸ್ಸಿನವರಾಗಿದ್ದು, ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಮಧುಮೇಹ ಸಂಬಂಧಿತ ಸಮಸ್ಯೆಯಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಪಾಲಿಕೆ ತಿಳಿಸಿದೆ.
ಕೋವಿಡ್‌ನ ಹೊಸ ಉಪತಳಿ ದೇಶದಲ್ಲಿ ಮೊದಲ ಪ್ರಕರಣ ಪತ್ತೆ
ನವದೆಹಲಿ: ಭಾರತದಲ್ಲಿ ಕೋವಿಡ್‌ನ ಹೊಸ ಉಪತಳಿ ‘ಎನ್‌ಬಿ. 1.8.1’ರ ಒಂದು ಪ್ರಕರಣ ಹಾಗೂ ‘ಎಲ್‌ಎಫ್.7’ರ ನಾಲ್ಕು ಪ್ರಕರಣಗಳು ದೃಢಪಟ್ಟಿವೆ ಎಂದು ವೈರಾಣು ಸಂರಚನಾ ವಿಶ್ಲೇಷಣೆ ಸಂಸ್ಥೆ (ಐಎನ್‌ಎಸ್‌ಎಸಿಒಜಿ) ದತ್ತಾಂಶಗಳಿಂದ ಶನಿವಾರ ತಿಳಿದುಬಂದಿದೆ.
‘ಎನ್‌ಬಿ. 1.8.1’ ಮತ್ತು ‘ಎಲ್‌ಎಫ್.7’ ಉಪತಳಿಗಳು ‘ಅಪಾಯಕಾರಿ’ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಚೆಗೆ ಹೇಳಿತ್ತು. ಇದನ್ನು ನಿಗಾ ವಹಿಸಬೇಕಾದ ಉಪತಳಿ ಎಂದು ವರ್ಗೀಕರಿಸಿತ್ತು. ಆದರೆ, ಇದೇ ಉಪತಳಿಯು ಚೀನಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿವೆ ಎಂದು ವರದಿಯಾಗಿದೆ.
ಐಎನ್‌ಎಸ್‌ಎಸಿಒಜಿ ಪ್ರಕಾರ, ‘ಎನ್‌ಬಿ. 1.8.1’ ಉಪತಳಿಯ ಒಂದು ಪ್ರಕರಣ ತಮಿಳುನಾಡಿನಲ್ಲಿ ಏಪ್ರಿಲ್‌ನಲ್ಲಿ ಪತ್ತೆಯಾಗಿದೆ. ‘ಎಲ್‌ಎಫ್.7’ರ ನಾಲ್ಕು ಪ್ರಕರಣಗಳು ಗುಜರಾತ್‌ನಲ್ಲಿ ಇದೇ ತಿಂಗಳಲ್ಲಿ ದೃಢಪಟ್ಟಿದೆ.
ದೇಶದಲ್ಲಿ ಈಗ ಕೋವಿಡ್ ಹರಡಲು ಕಾರಣವಾಗಿರುವ ಪ್ರಮುಖ ಉಪತಳಿ ‘ಜೆನ್.1’ ಆಗಿದೆ. ಕೋವಿಡ್‌ನ ಸಕ್ರಿಯ ಪ್ರಕರಣಗಳಲ್ಲಿ ಶೇ 53ರಷ್ಟು ಇದೇ ಉಪತಳಿಯಿಂದ ಹರಡಿದೆ. ‘ಬಿಎ.2’ ಉಪತಳಿ ಶೇ 26 ಪ್ರಕರಣಗಳಿಗೆ ಕಾರಣವಾದರೆ ಶೇ 21ರಷ್ಟು ಪ್ರಕರಣಗಳು ಇತರ ಉಪತಳಿಗಳಿಂದ ಹರಡಿದೆ.
ಮೇ 19ರವರೆಗಿನ ಮಾಹಿತಿ ಪ್ರಕಾರ ದೇಶದಲ್ಲಿ ಕೋವಿಡ್‌ನ 257 ಸಕ್ರಿಯ ಪ್ರಕರಣಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.