ADVERTISEMENT

ಸಮೀಕ್ಷೆ ಆಧರಿಸಿ ರಾಜಕೀಯ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:22 IST
Last Updated 20 ಮೇ 2019, 20:22 IST
ಬಟಿಂಡಾದಲ್ಲಿ ಮತಗಟ್ಟೆಗೆ ಸಶಸ್ತ್ರ ಸೀಮಾಬಲದ ಯೋಧರ ಕಾವಲು ಪಿಟಿಐ ಚಿತ್ರ
ಬಟಿಂಡಾದಲ್ಲಿ ಮತಗಟ್ಟೆಗೆ ಸಶಸ್ತ್ರ ಸೀಮಾಬಲದ ಯೋಧರ ಕಾವಲು ಪಿಟಿಐ ಚಿತ್ರ   

ಲೋಕಸಭೆ ಚುನಾವಣೆಯ ಮತ ಎಣಿಕೆಗೆ ದಿನಗಣನೆ ಆರಂಭವಾಗಿದೆ. ಭಾನುವಾರ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವು ರಾಜಕೀಯ ಪಕ್ಷಗಳಲ್ಲಿ ಸ್ವಲ್ಪ ಮಟ್ಟಿನ ತಲ್ಲಣ ಸೃಷ್ಟಿಸಿದೆ. ಎನ್‌ಡಿಎಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಸಮೀಕ್ಷೆಗಳು ಹೇಳಿರುವುದರಿಂದ ಆ ಬಣದಲ್ಲಿ ಸಂಭ್ರಮ ಮನೆ ಮಾಡಿದೆ. ಯಾವ ಮೈತ್ರಿಕೂಟಕ್ಕೂ ಸ್ಪಷ್ಟ ಬಹುಮತ ಬಾರದು ಎಂದು ಭಾವಿಸಿರುವವರಲ್ಲಿ ನಿರಾಸೆ ಮೂಡಿದೆ. ಮತಗಟ್ಟೆ ಸಮೀಕ್ಷೆಗಳ ಆಧಾರದಲ್ಲಿ ರಾಜಕೀಯ ಲೆಕ್ಕಾಚಾರವೂ ಆರಂಭವಾಗಿದೆ. ಮತಯಂತ್ರದ ಬಗ್ಗೆಯೂ ಚರ್ಚೆ ಶುರುವಾಗಿದೆ

ಸಮೀಕ್ಷೆ: ವಿಪಕ್ಷಗಳಿಗೆ ಸಂಚಿನ ಶಂಕೆ

ನವದೆಹಲಿ: ಮತಗಟ್ಟೆ ಸಮೀಕ್ಷೆಗಳಲ್ಲಿ ನಮಗೆ ವಿಶ್ವಾಸವಿಲ್ಲ ಎಂದಿರುವ ವಿರೋಧಪಕ್ಷಗಳ ಅನೇಕ ಮುಖಂಡರು, ‘ಈ ಸಮೀಕ್ಷೆಗಳ ಹಿಂದೆ ಸಂಚು ಅಡಗಿದೆ’ ಎಂದು ಶಂಕಿಸಿದ್ದಾರೆ.

ADVERTISEMENT

‘ಮತಗಟ್ಟೆ ಸಮೀಕ್ಷೆ ಎಂಬುದು ಮೋಸ ಮತ್ತು ಸುಳ್ಳಿನ ಕತೆ. ಈ ಸಮೀಕ್ಷೆಗಳನ್ನು ಮಾಡಿದವರು ಯಾರು, ಅವರು ಯಾವ ಜಾತಿಗೆ ಸೇರಿದವರು. ಇಂಥ ಸಮೀಕ್ಷೆ ನಡೆಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎನ್‌ಡಿಎ ಸೋಲುವುದು ಅಗತ್ಯ’ ಎಂದು ಎಲ್‌ಜೆಡಿ ಮುಖಂಡ ಶರದ್‌ ಯಾದವ್‌ ಹೇಳಿದ್ದಾರೆ.

‘ಮತಗಟ್ಟೆ ಸಮೀಕ್ಷೆ ಎಂಬ ‘ಗಾಸಿಪ್‌’ ಅನ್ನು ನಾನು ನಂಬುವುದಿಲ್ಲ. ಅದರ ಹಿಂದಿನ ಉದ್ದೇಶವೆಂದರೆ ಮತಯಂತ್ರಗಳನ್ನು ತಿರುಚುವುದು ಅಥವಾ ಸಾವಿರಾರು ಮತಯಂತ್ರಗಳನ್ನು ಬದಲಿಸುವುದಾಗಿದೆ. ಇಂಥ ಸಂದರ್ಭದಲ್ಲಿ ವಿರೋಧಪಕ್ಷಗಳೆಲ್ಲವೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

‘ಇದೇನು ಹಣ ಕೊಟ್ಟು ಮಾಡಿಸಿರುವ ಸಮೀಕ್ಷೆಯೇ? ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಲಭಿಸುತ್ತವೆ ಎಂದರೆ ಯಾರು ನಂಬುತ್ತಾರೆ? ಸಮೀಕ್ಷೆಯ ನೆರಳಿನಲ್ಲಿ ಮತಯಂತ್ರ ತಿದ್ದಲಾಗುತ್ತಿದೆಯೇ? ಇವಿಎಂ ಹಗರಣ ನಡೆದಿರುವುದರಿಂದ ಚುನಾವಣೆಗಳನ್ನು ರದ್ದುಪಡಿಸುವಂತೆ ವಿರೋಧಪಕ್ಷಗಳು ಒಗ್ಗಟ್ಟಾಗಿ ಒತ್ತಾಯ ಮಾಡಬೇಕು’ ಎಂದು ಎಎಪಿ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ನಾಯ್ಡು–ಕೆಸಿಆರ್‌ ಪಾತ್ರವೇನು?

ಜೆ.ಬಿ.ಎಸ್‌. ಉಮಾನಾದ್‌

ಹೈದರಾಬಾದ್‌: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂಬುದು ತೆಲುಗು ಭಾಷಿಕ ರಾಜ್ಯಗಳಾದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರ ಮಹತ್ವಾಕಾಂಕ್ಷೆ. ಮತಗಟ್ಟೆ ಸಮೀಕ್ಷೆಗಳ ಫಲಿತಾಂಶದ ರೀತಿಯಲ್ಲಿಯೇ ಚುನಾವಣಾ ಫಲಿತಾಂಶವೂ ಬಂದರೆ ಈ ಇಬ್ಬರು ಮುಖ್ಯಮಂತ್ರಿಗಳಿಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಪಾತ್ರವೇನೂ ಇರದು.

ತೆಲಂಗಾಣದಲ್ಲಿ ಕೆಸಿಆರ್‌ ಅವರ ಟಿಆರ್‌ಎಸ್‌ 12–16 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವೇ ಬಂದರೆ ಕೆಸಿಆರ್‌ ಅವರು ಕೇಂದ್ರದಲ್ಲಿ ದೊಡ್ಡ ಪಾತ್ರ ವಹಿಸಲಾಗದು. ಒಂದು ವೇಳೆ ಎನ್‌ಡಿಎ ಅಥವಾ ಯುಪಿಎಗೆ ಸರಳ ಬಹುಮತಕ್ಕೆ ಕೊರತೆಯಾದರೆ ಕೆಸಿಆರ್‌ ಅವರ ಪಾತ್ರ ನಿರ್ಣಾಯಕ ಎನಿಸಿಕೊಳ್ಳಲಿದೆ. ಬಿಜೆಪಿ ಜತೆಗೆ ಅವರು ಉತ್ತಮ ಸಂಬಂಧ ಹೊಂದಿರುವುದು ಅವರಿಗೆ ನೆರವಾಗಬಹುದು.

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾಯ್ಡು ಅವರ ಟಿಡಿಪಿಗೆ ಹಿನ್ನಡೆ ಆಗಲಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವೇ ಮುಂದಿನ ಸರ್ಕಾರ ರಚಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಹಾಗಿದ್ದರೂ, ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟ ಕಟ್ಟಲು ನಾಯ್ಡು ಅವರು ಶ್ರಮಿಸುತ್ತಿದ್ದಾರೆ. ನಾಯ್ಡು ಅವರ ಪಕ್ಷವೇ ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಕೇಂದ್ರದಲ್ಲಿ ನರೇಂದ್ರ ಮೋದಿ ಅವರೇ ಪ್ರಧಾನಿಯಾದರೆ ಕೇಂದ್ರದ ಜತೆಗೆ ಆಂಧ್ರ ಪ್ರದೇಶದ ಸಂಬಂಧ ಇನ್ನಷ್ಟು ಸಂಕೀರ್ಣಗೊಳ್ಳಬಹುದು. ಹಾಗೆಯೇ, ಲೋಕಸಭೆಯಲ್ಲಿ ಟಿಡಿಪಿಯ ಸ್ಥಾನಗಳು ಕಡಿಮೆಯಾದರೆ ವಿರೋಧ ಪಕ್ಷಗಳ ಕೂಟದಲ್ಲಿಯೂ ನಾಯ್ಡು ಅವರ ಪ್ರಭಾವ ಕುಸಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.