ADVERTISEMENT

ಕೇರಳ: ಎಲ್‌ಡಿಎಫ್‌–ಯುಡಿಎಫ್ ಮ್ಯಾಚ್‌ಫಿಕ್ಸಿಂಗ್–ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 31 ಮಾರ್ಚ್ 2021, 1:55 IST
Last Updated 31 ಮಾರ್ಚ್ 2021, 1:55 IST
ತಮಿಳುನಾಡಿನ ಧಾರಾಪುರಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರತ್ತ ಕೈಬೀಸಿದರು --- – ಪಿಟಿಐ ಚಿತ್ರ
ತಮಿಳುನಾಡಿನ ಧಾರಾಪುರಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರತ್ತ ಕೈಬೀಸಿದರು --- – ಪಿಟಿಐ ಚಿತ್ರ   

ಪಾಲಕ್ಕಾಡ್: ‘ಕೆಲವೇ ಕೆಲವು ಬೆಳ್ಳಿಯ ನಾಣ್ಯಗಳ ಆಸೆಗಾಗಿ ಯೇಸುಕ್ರಿಸ್ತನ ಶಿಷ್ಯ ಜ್ಯೂಡಾಸ್, ಯೇಸುವನ್ನು ಹಿಡಿದುಕೊಟ್ಟು ದ್ರೋಹ ಬಗೆದ. ಎಲ್‌ಡಿಎಫ್ ಸರ್ಕಾರ ಸಹ ಚಿನ್ನಕ್ಕಾಗಿ, ಕೇರಳದ ಜನರಿಗೆ ದ್ರೋಹ ಬಗೆಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಇ.ಶ್ರೀಧರನ್ ಪರವಾಗಿ ಅವರು ಇಲ್ಲಿ ಪ್ರಚಾರ ನಡೆಸಿದರು. ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿರೋಧ ಪಕ್ಷವಾದ ಯುಡಿಎಫ್ ವಿರುದ್ಧ ಹರಿಹಾಯ್ದರು.

‘ಉಮ್ಮನ್ ಚಾಂಡಿ ಅವರ ಯುಡಿಎಫ್ ಸರ್ಕಾರ ಸೂರ್ಯನ ಕಿರಣಗಳನ್ನೂ ಬಿಡಲಿಲ್ಲ. ಸೋಲಾರ್ ಹಗರಣ ನಡೆಸಿತು. ಆಗ ಎಲ್‌ಡಿಎಫ್ ಸುಮ್ಮನೆ ಕೂಗಾಡಿತು ಅಷ್ಟೆ. ಅಧಿಕಾರಕ್ಕೆ ಬಂದ ನಂತರ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಶಬರಿಮಲೆಗೆ ಮಹಿಳೆಯರ ಪ್ರವೇಶದ ಸಮಯದಲ್ಲಿ ಎಲ್‌ಡಿಎಫ್ ಸರ್ಕಾರ ಜನರ ಮೇಲೆ ಲಾಠಿ ಪ್ರಯೋಗಿಸಿತು. ಇದನ್ನು ಯುಡಿಎಫ್ ಪ್ರಶ್ನಿಸಲಿಲ್ಲ’ ಎಂದು ಮೋದಿ ಆರೋಪಿಸಿದ್ದಾರೆ.

ADVERTISEMENT

‘ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಒಂದು ಒಪ್ಪಂದ ಮಾಡಿಕೊಂಡಿವೆ. ಐದು ವರ್ಷ ಎಲ್‌ಡಿಎಫ್ ಅಧಿಕಾರದಲ್ಲಿದ್ದು, ಚೆನ್ನಾಗಿ ಲೂಟಿ ಮಾಡುತ್ತದೆ. ನಂತರದ ಐದು ವರ್ಷ ಯುಡಿಎಫ್ ಅಧಿಕಾರಕ್ಕೆ ಬಂದು ಚೆನ್ನಾಗಿ ಲೂಟಿ ಮಾಡುತ್ತದೆ. ಎರಡೂ ಮೈತ್ರಿಕೂಟಗಳು ಹೀಗೆ ಮ್ಯಾಚ್‌ ಫಿಕ್ಸಿಂಗ್ ಮಾಡಿಕೊಂಡು ಜನರನ್ನು ವಂಚಿಸುತ್ತಲೇ ಬಂದಿವೆ. ಆದರೆ, ಈ ವಂಚನೆಯ ಒಪ್ಪಂದವನ್ನು ಕೇರಳದ ಯುವಜನರು ಪ್ರಶ್ನಿಸುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ಮೊದಲ ಬಾರಿಯ ಮತದಾರರಿಂದ ಕೇರಳದ ರಾಜಕಾರಣದಲ್ಲಿ ಬದಲಾವಣೆ ಆಗುತ್ತಿದೆ’ ಎಂದು ಮೋದಿ ಹೇಳಿದ್ದಾರೆ.

'ದಾಳಿಗೆ ಹಳೆಯ 2ಜಿ ಕ್ಷಿಪಣಿ'

ಧಾರಾಪುರಂ (ತಮಿಳುನಾಡು) (ಪಿಟಿಐ): 'ತಮಿಳುನಾಡಿನ ನಾರೀಶಕ್ತಿಯ ಮೇಲೆ ದಾಳಿ ನಡೆಸಲು ಕಾಂಗ್ರೆಸ್‌ ಮತ್ತು ಡಿಎಂಕೆ ಹಳೆಯ 2ಜಿ ಕ್ಷಿಪಣಿ ಬಿಟ್ಟಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಇಲ್ಲಿ, ಎಐಎಡಿಎಂಕೆ ಮತ್ತು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಮೋದಿ ಅವರು, ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ಮಾಜಿ ಕೇಂದ್ರ ಸಚಿವ ಎ.ರಾಜಾ ಅವರು ಈಚೆಗೆ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರ ಹುಟ್ಟಿನ ಬಗ್ಗೆ ಅವಹೇಳನ ಮಾಡಿದ್ದರು. 2ಜಿ ಹಗರಣದಲ್ಲಿ ಆರೋಪಿಯಾಗಿದ್ದ ರಾಜಾ ಅವರ ಹೆಸರನ್ನು ಉಲ್ಲೇಖಿಸದೆಯೇ ಪ್ರಧಾನಿ ಮೋದಿ ಅವರು, ರಾಜಾ ಅವರನ್ನು ಹಳೆಯ 2ಜಿ ಕ್ಷಿಪಣಿ ಎಂದಿದ್ದಾರೆ.

'ಕಾಂಗ್ರೆಸ್ ಮತ್ತು ಡಿಎಂಕೆಯ ನಾಯಕರು ತಮ್ಮ ಭಾಷಣದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುವುದೇ ಇಲ್ಲ. ಬದಲಿಗೆ ಬೇರೆಯವರ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಾರೆ. ಈ ಪಕ್ಷಗಳು ಅಧಿಕಾರಕ್ಕೆ ಬಂದರೆ ತಮಿಳುನಾಡಿನ ಮಹಿಳೆಯರ ಮೇಲೆ ದಾಳಿ ನಡೆಸುವ ಕೆಲಸ ಮಾಡುತ್ತಾರೆ' ಎಂದು ಅವರು ಹೇಳಿದ್ದಾರೆ.

'ಮುಖ್ಯಮಂತ್ರಿಗೇ ಟಿಕೆಟ್ ಇಲ್ಲ'

'ಪಕ್ಷದ ನಾಯಕ ರಾಹುಲ್ ಗಾಂದಿ ಅವರ ಪಾದರಕ್ಷೆಗಳನ್ನು ಎತ್ತಿಇಡುವ ಕೆಲಸವನ್ನೂ ಪುದುಚೇರಿಯ ಈ ಹಿಂದಿನ ಮುಖ್ಯಮಂತ್ರಿ ನಾರಾಯಣಸ್ವಾಮಿ ಮಾಡಿದ್ದರು. ಹೀಗಿದ್ದೂ ಅವರಿಗೆ ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಅಂದರೆ, ಅವರದ್ದು ಇನ್ನೆಷ್ಟರಮಟ್ಟಿಗೆ ವಿಚ್ಛಿದ್ರಕಾರಿ ಸರ್ಕಾರವಾಗಿದ್ದರಬಹುದು' ಎಂದು ಮೋದಿ ಲೇವಡಿ ಮಾಡಿದ್ದಾರೆ.

ಪುದುಚೇರಿಯಲ್ಲಿ ಸ್ಥಳೀಯ ಸರ್ಕಾರವೇ ಇರಲಿಲ್ಲ. ಬದಲಿಗೆ ಹೈಕಮಾಂಡ್ ಸರ್ಕಾರ, ದೆಹಲಿ ಹೈಕಮಾಂಡ್ ಸರ್ಕಾರ ಇಲ್ಲಿ ಅಸ್ತಿತ್ವದಲ್ಲಿ ಇತ್ತು. ಹೀಗಾಗಿ ಇಲ್ಲಿ ಅಭಿವೃದ್ಧಿಯಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ, ಇಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.