
ನವದೆಹಲಿ: ‘ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸುವ ಸಾವು ಮತ್ತು ಹಿಂಸಾಚಾರ ಪ್ರಕರಣವು ಸಮಾಜಕ್ಕೆ ಕಳಂಕ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಲಭ್ಯತೆ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಮತ್ತು ಸಂದೀಪ್ ಮಹ್ತಾ ಅವರ ಪೀಠವು, ‘ರಾಜಸ್ಥಾನದಲ್ಲಿ ಕಳೆದ 8 ತಿಂಗಳಲ್ಲಿ 11 ಕಸ್ಟಡಿ ಸಾವು ಸಂಭವಿಸಿವೆ. ಇದು ಸಮಾಜಕ್ಕೆ ಕಪ್ಪು ಚುಕ್ಕೆ, ಇದನ್ನು ದೇಶ ಒಪ್ಪುವುದಿಲ್ಲ’ ಎಂದು ಹೇಳಿತು.
‘ಕಸ್ಟಡಿ ಸಾವಿನ ವಿಚಾರದಲ್ಲಿ ಇದುವರೆಗೆ ಯಾವ ಕ್ರಮ ಕೈಗೊಂಡಿದ್ದೀರಿ ಎನ್ನುವುದರ ಅನುಪಾಲನಾ ಪ್ರಮಾಣಪತ್ರವನ್ನು ಯಾಕೆ ಸಲ್ಲಿಸಿಲ್ಲ’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಪೀಠವು, ‘ಸುಪ್ರೀಂ ಕೋರ್ಟ್ ಆದೇಶವನ್ನು ಹಗುರವಾಗಿ ಪರಿಗಣಿಸಿದ್ದೀರಾ’ ಎಂದು ತರಾಟೆಗೆ ತೆಗೆದುಕೊಂಡಿತು.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನಾನು ಹಾಜರಾಗಿಲ್ಲ, ಆದರೆ, ಯಾರೂ ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಿಲ್ಲ. ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಕೇಂದ್ರವು ಮೂರು ವಾರಗಳಲ್ಲಿಅನುಪಾಲನಾ ಪ್ರಮಾಣಪತ್ರ ಸಲ್ಲಿಸಲಿದೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು.
ಪ್ರಕರಣವೇನು?: ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆಯೆ ಎನ್ನುವುದರ ಕುರಿತು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ 2018ರಲ್ಲಿ ಆದೇಶ ನೀಡಿದೆ. 2020ರಲ್ಲಿ ಹೊರಡಿಸಿರುವ ಇನ್ನೊಂದು ಆದೇಶದಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯ, ಎನ್‌ಐಎ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿ, ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಅನುಪಾಲನಾ ಪ್ರಮಾಣಪತ್ರ ಸಲ್ಲಿಸಬೇಕು. ಆದರೆ, ಇದುವರೆಗೆ 11 ರಾಜ್ಯಗಳು ಮಾತ್ರ ಪ್ರಮಾಣಪತ್ರ ಸಲ್ಲಿಸಿವೆ ಎಂದು ನ್ಯಾಯಪೀಠ ತಿಳಿಸಿತು.
‘ರಾಜ್ಯದ ಎಲ್ಲ ಠಾಣೆಗಳು, ಹೊರ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಜಿಲ್ಲಾ ಕೇಂದ್ರದಿಂದ ನಿಗಾ ವಹಿಸಲಾಗುತ್ತಿದೆ’ ಎಂದು ಮಧ್ಯಪ್ರದೇಶ ಸರ್ಕಾರ ವರದಿ ಸಲ್ಲಿಸಿದ್ದು, ಇದಕ್ಕೆ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತು.
ಈ ವಿಚಾರವಾಗಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿದ್ದ ವಕೀಲ ಸಿದ್ಧಾರ್ಥ ದವೆ ಅವರು ನೀಡಿದ ವಿವರಣೆಯನ್ನೂ ಆಲಿಸಿದ ನ್ಯಾಯಪೀಠ ಮಂಗಳವಾರ ಆಲಿಸಿತು. ‘ಠಾಣೆಯ ಒಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ತನಿಖೆಗೆ ಅಡ್ಡಿಯಾಗುತ್ತದೆ ಎಂಬ ವಾದ ಸಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿದೆ’ ಎಂದು ನ್ಯಾಯಪೀಠ ಹೇಳಿತು.
ಈ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 16ರಂದು ನಡೆಯಲಿದೆ.
ಎಂಟು ತಿಂಗಳಲ್ಲಿ 11 ಕಸ್ಟಡಿ ಸಾವು
ರಾಜಸ್ಥಾನದಲ್ಲಿ 2025ರ ಜನವರಿಯಿಂದ ಆಗಸ್ಟ್‌ವರೆಗೆ ಪೊಲೀಸ್ ಕಸ್ಟಡಿಯಲ್ಲಿ 11 ಸಾವುಗಳು ಸಂಭವಿಸಿವೆ ಎಂಬ ಮಾಧ್ಯಮ ವರದಿ ಆಧರಿಸಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. 11ರಲ್ಲಿ 7 ಸಾವುಗಳು ಉದಯಪುರ ವಿಭಾಗದಲ್ಲಿ ವರದಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.