ADVERTISEMENT

ಬರ: ರಾಜ್ಯಗಳಿಗೆ ಕೇಂದ್ರದ ಸಲಹೆ

ಜಲಾಶಯಗಳ ನೀರಿನ ಪ್ರಮಾಣ ಕುಸಿತ: ಮಿತವ್ಯಯ ಬಳಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:15 IST
Last Updated 18 ಮೇ 2019, 20:15 IST
ಚೆನ್ನೈನ ಚೆಂಬರಂಬಾಕಂ ಜಲಾಶಯದಲ್ಲಿ ನೀರು ಬತ್ತಿಹೋಗಿದ್ದು, ಸಾವಿರಾರು ಮೀನುಗಳು ಮೃತಪಟ್ಟಿವೆ –ಪಿಟಿಐ ಚಿತ್ರ
ಚೆನ್ನೈನ ಚೆಂಬರಂಬಾಕಂ ಜಲಾಶಯದಲ್ಲಿ ನೀರು ಬತ್ತಿಹೋಗಿದ್ದು, ಸಾವಿರಾರು ಮೀನುಗಳು ಮೃತಪಟ್ಟಿವೆ –ಪಿಟಿಐ ಚಿತ್ರ   

ನವದೆಹಲಿ: ದೇಶದ ಜಲಾಶಯಗಳಲ್ಲಿನ ನೀರಿನ ಸಂಗ್ರಹವು ಕನಿಷ್ಠ ಪ್ರಮಾಣ ತಲುಪುತ್ತಿರುವುದರಿಂದ ಬೇಸಿಗೆ ಕಳೆಯುವವರೆಗೆ ವಿವೇಚನೆಯೊಂದಿಗೆ ನೀರು ಬಳಸುವಂತೆ ಕರ್ನಾಟಕ ಸೇರಿದಂತೆ ರಾಷ್ಟ್ರದ ಕೆಲವು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಮೇ ತಿಂಗಳ ಮಧ್ಯ ಭಾಗದಲ್ಲಿನ ಸಂಗ್ರಹ ಪ್ರಮಾಣವು ಕಳೆದ ಒಂದು ದಶಕದ ಅವಧಿಗೆ ಹೋಲಿಸಿದರೆ ಶೇ 20ರಷ್ಟು ಕಡಿಮೆ ಆಗಿರುವುದರಿಂದ, ಮಳೆ ಸುರಿದು ಒಳಹರಿವು ಶುರು ಆಗುವವರೆಗೆ ಜಲಾಶಯಗಳಲ್ಲಿನ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಬಳಸಬೇಕು ಎಂದು ಕೇಂದ್ರದ ಜಲ ಆಯೋಗ (ಸಿಡಬ್ಲ್ಯೂಸಿ) ಹೇಳಿದೆ.

ಕರ್ನಾಟಕ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಪಶ್ಚಿಮದ ಗುಜರಾತ್‌ ರಾಜ್ಯಗಳಿಗೂ ನೀರಿನ ಮಿತಬಳಕೆಯ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ADVERTISEMENT

ಮೇ 16ರ ಮಾಹಿತಿಯ ಪ್ರಕಾರ, ದೇಶದ 91 ಜಲಾಶಯಗಳಲ್ಲಿ 35.99 ದಶಕೋಟಿ ಕ್ಯೂಬಿಕ್‌ ಮೀಟರ್ಸ್‌ (ಬಿಸಿಎಂ) ನೀರಿನ ಸಂಗ್ರಹ ಇದೆ. ಇದು ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 22ರಷ್ಟಾಗಲಿದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 161.993 ಬಿಸಿಎಂ ಎಂದು ಜಲಾಶಯಗಳ ಸಂಗ್ರಹದ ಮೇಲ್ವಿಚಾರಣೆಯ ಹೊಣೆ ಹೊತ್ತಿರುವ ಸಿಡಬ್ಲ್ಯೂಸಿ ತಿಳಿಸಿದೆ.

ರಾಜ್ಯದಲ್ಲಿ ಉತ್ತಮ:
ದಕ್ಷಿಣ ಭಾರತದ ಪ್ರಮುಖ 31 ಜಲಾಶಯಗಳ ಒಟ್ಟು ವಾರ್ಷಿಕ ಸಂಗ್ರಹ ಸಾಮರ್ಥ್ಯ 51.59 ಬಿಸಿಎಂ. ಆದರೆ, ಸದ್ಯದ ನೀರಿನ ಸಂಗ್ರಹ ಪ್ರಮಾಣ 6.86 ಬಿಸಿಎಂ. ಇದು ಕೇವಲ ಶೇ 13ರಷ್ಟು. ಕಳೆದ ವರ್ಷವೂ ಇಷ್ಟೇ ಪ್ರಮಾಣದ ಸಂಗ್ರಹ ದಾಖಲಾಗಿದ್ದು, ಒಂದು ದಶಕದ ಅವಧಿಯಲ್ಲಿ ಈ ಪ್ರಮಾಣ ಶೇ 16ರಷ್ಟಾಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದ 14 ಜಲಾಶಯಗಳ ಸಂಗ್ರಹವು ಉತ್ತಮವಾಗಿಯೇ ಇದೆ. 23.492 ಬಿಸಿಎಂ ಒಟ್ಟು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯಗಳಲ್ಲಿ ಇದೀಗ ಶೇ 20.14ರಷ್ಟು ಅಂದರೆ, ಕೇವಲ 4.094 ಬಿಸಿಎಂ ನೀರು ಲಭ್ಯವಿದೆ. ಕಳೆದ ವರ್ಷ ಇದೇ ಅವಧಿ ಶೇ 17.07ರಷ್ಟು ಸಂಗ್ರಹವಿತ್ತು.

ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಸ್ಥಿತಿ ಗಂಭೀರವಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನ ಜಲಾಶಯಗಳಲ್ಲಿನ ಸಂಗ್ರಹವು ಒಟ್ಟು ಸಂಗ್ರಹದ ಶೇ 13ರಷ್ಟು ಅಂದರೆ, ಕೇವಲ 4.10 ಬಿಸಿಎಂ. ಮರಾಠವಾಡಾ ಪ್ರಾಂತ್ಯದಲ್ಲಿನ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಪಾತಾಳ ಮುಟ್ಟಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಸಿಡಬ್ಲ್ಯೂಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.