ADVERTISEMENT

ದುರ್ಬಲವಾದ ‘ಅಸನಿ’: ಒಡಿಶಾ, ಬಂಗಾಳ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:54 IST
Last Updated 12 ಮೇ 2022, 15:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭುವನೇಶ್ವರ: ‘ಅಸನಿ’ ಚಂಡಮಾರುತದ ವೇಗವು ತಗ್ಗಿದ್ದು, ಆಂಧ್ರಪ್ರದೇಶ ಕರಾವಳಿಯಲ್ಲಿ ಮತ್ತಷ್ಟು ದುರ್ಬಲಗೊಂಡಿದೆ. ಹೀಗಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಅಪಾಯದದಿಂದ ಪಾರಾಗಿವೆ.

‘ಅಸನಿ’ ಚಂಡಮಾರುತದ ಪರಿಣಾಮಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶದಕರಾವಳಿಯ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗಬಹುದು. ಆದರೆ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

ಮುಂದಿನ 12 ಗಂಟೆಗಳಲ್ಲಿ ಪಶ್ಚಿಮಕೇಂದ್ರ ಮತ್ತು ಪಕ್ಕದ ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರಲಿದ್ದು, ಕ್ರಮೇಣ ಸಹಜ ಸ್ಥಿತಿಯತ್ತ ಮರಳುವ ನಿರೀಕ್ಷೆ ಇದೆ. ಮುಂದಿನ 12 ಗಂಟೆಗಳ ಕಾಲ ಪಶ್ಚಿಮ ಬಂಗಾಳ ಕೊಲ್ಲಿ ಮತ್ತು ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ADVERTISEMENT

ಒಡಿಶಾದ ಕೆಲವು ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ 8.30ರವರೆಗೆ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಕಳೆದ 24 ಗಂಟೆಗಳಲ್ಲಿ ಬರಿಪದದಲ್ಲಿ (ಮಯೂರ್‌ಭಂಜ್ ಜಿಲ್ಲೆ) 50 ಮಿ.ಮೀ ಅತಿ ಹೆಚ್ಚು ಮಳೆಯಾಗಿದೆ. ಕಿಯೋಂಜಾರ್‌ನ ಆನಂದಪುರದಲ್ಲಿ 44.2 ಮಿ.ಮೀ ಮತ್ತು ಗಂಜಾಮ್‌ನ ಸೊರಡಾದಲ್ಲಿ 37.2 ಮಿ.ಮೀ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಆರು ಗಂಟೆಗಳಲ್ಲಿ ಹವಾಮಾನ ಪರಿಸ್ಥಿತಿಯು ಸ್ಥಿರವಾಗಿದ್ದು, ಚಂಡಮಾರುತದ ವೇಗ ದುರ್ಬಲಗೊಂಡಿದೆ. ಮುಂದಿನ 12 ಗಂಟೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಡುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.

ಕಳೆದ ವಾರ ಉದ್ಭವಿಸಿದ ‘ಅಸನಿ’ ಚಂಡಮಾರುತದ ಪಥದ ಮೇಲೆ ಹವಾಮಾನ ತಜ್ಞರು ನಿಗಾ ಇರಿಸಿದ್ದು,ಸಂಭವನೀಯ ಹಾನಿ ತಡೆಗೆ ಮುನ್ನೆಚ್ಚರಿಕೆ ವಹಿಸಲು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.