ADVERTISEMENT

ಚಂಡಮಾರುತದಿಂದ ಭಾರಿ ಹಾನಿ: ಬುಲ್‌ಬುಲ್‌ಗೆ ತತ್ತರಿಸಿದ ಪಶ್ಚಿಮ ಬಂಗಾಳ

ಇನ್ನಷ್ಟೇ ಸಿಗಬೇಕಿದೆ ನಷ್ಟದ ಅಂದಾಜು l ಪರಿಹಾರ ಕಾರ್ಯ ಚುರುಕು

ಪಿಟಿಐ
Published 10 ನವೆಂಬರ್ 2019, 19:35 IST
Last Updated 10 ನವೆಂಬರ್ 2019, 19:35 IST
ಪಶ್ಚಿಮ ಬಂಗಾಳದ 24 ದಕ್ಷಿಣ ಪರಗಣ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಂಡಮಾರುತದ ತೀವ್ರತೆಗೆ ಧ್ವಂಸವಾಗಿರುವ ಮನೆ ಮತ್ತು ಬಾಳೆ ಗಿಡಗಳು. ಮನೆಯಲ್ಲಿ ಅಳಿದುಳಿದ ಸಾಮಗ್ರಿಗಳನ್ನು ಅಲ್ಲಿನ ಜನರು ಸಂಗ್ರಹಿಸಿದರು –ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ 24 ದಕ್ಷಿಣ ಪರಗಣ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಂಡಮಾರುತದ ತೀವ್ರತೆಗೆ ಧ್ವಂಸವಾಗಿರುವ ಮನೆ ಮತ್ತು ಬಾಳೆ ಗಿಡಗಳು. ಮನೆಯಲ್ಲಿ ಅಳಿದುಳಿದ ಸಾಮಗ್ರಿಗಳನ್ನು ಅಲ್ಲಿನ ಜನರು ಸಂಗ್ರಹಿಸಿದರು –ಪಿಟಿಐ ಚಿತ್ರ   

ಕೋಲ್ಕತ್ತ: ಬುಲ್‌ಬುಲ್‌ ಚಂಡಮಾರುತವು ತಂದೊಡ್ಡಿದ್ದ ಬಾರಿ ಮಳೆ ಮತ್ತು ಗಾಳಿಯು ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಮಾಡಿದೆ. ಚಂಡಮಾರುತ ಸಂಬಂಧಿ ಅವಘಡಗಳಲ್ಲಿ 10 ಜನರು ಬಲಿಯಾಗಿದ್ದಾರೆ.

ಪಶ್ಚಿಮ ಬಂಗಾಳವನ್ನು ಹಾದು ಹೋಗಿರುವ ಬುಲ್‌ಬುಲ್‌ ಚಂಡಮಾರುತವು, ಈಗ ಬಾಂಗ್ಲಾದೇಶವನ್ನು ತಲುಪಿದೆ. ಆದರೆ ತೀವ್ರತೆ ಕಡಿಮೆಯಾಗಿದೆ.

ಶನಿವಾರ ತಡರಾತ್ರಿ ಪಶ್ಚಿಮ ಬಂಗಾಳವನ್ನು ಬುಲ್‌ಬುಲ್ ಪ್ರವೇಶಿಸಿತ್ತು. ಈ ವೇಳೆ ಗಾಳಿ ವೇಗ ಪ್ರತಿ ಗಂಟೆಗೆ 120 ಕಿ.ಮೀ.ನಷ್ಟಿತ್ತು. ಹೀಗಾಗಿ ಚಂಡಮಾರುತವು ಹಾದುಹೋದ ಪ್ರದೇಶದಲ್ಲಿದ್ದ ಗುಡಿಸಲು, ಮನೆಗಳ ಚಾವಣಿ ಹಾರಿಹೋಗಿವೆ. ನೂರಾರು ಮರಗಳು ಬುಡಮೇಲಾಗಿವೆ. ಬಾಳೆ ಗಿಡಗಳ ಎಲೆಗಳು ಛಿದ್ರವಾಗಿವೆ.ಆದರೆ ಈ ಪ್ರದೇಶಗಳಲ್ಲಿ ಇದ್ದ ಜನರನ್ನು ಮೊದಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿದ್ದ ಕಾರಣ ಪ್ರಾಣಹಾನಿ ಕಡಿಮೆಯಾಗಿದೆ.

ADVERTISEMENT

ಬಾಂಗ್ಲಾದಲ್ಲಿ ಹತ್ತು ಸಾವು
ಬುಲ್‌ಬುಲ್‌ ಚಂಡಮಾರುತವು ಭಾರಿ ಮಳೆಯೊಂದಿಗೆ ಬಾಂಗ್ಲಾದೇಶವನ್ನು ಪ್ರವೇಶಿಸಿದೆ. ಮಳೆ ಸಂಬಂಧಿ ಘಟನೆಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಒಳನಾಡು ಪ್ರವೇಶಿಸುತ್ತಿದ್ದಂತೆಯೇ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ.

ಚಂಡಮಾರುತವು ಭಾರಿ ವೇಗದೊಂದಿಗೆ ಬಾಂಗ್ಲಾದೇಶವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರವೇ ಮುನ್ಸೂಚನೆ ನಿಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಾಂಗ್ಲಾ ಸರ್ಕಾರ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ಹೀಗಾಗಿ ಪ್ರಾಣಹಾನಿಯ ಪ್ರಮಾಣ ಕಡಿಮೆ ಇದೆ ಎಂದು ಮೂಲಗಳು ಹೇಳಿವೆ.

ಆದರೆ ಮಳೆ ಸಂಬಂಧಿ ಘಟನೆಗಳಲ್ಲಿ 50ಕ್ಕೂ ಹೆಚ್ಚು ಜನರ ಗಾಯಗೊಂಡಿದ್ದಾರೆ. ಚಂಡಮಾರುತದಿಂದ ಭಾರಿ ಹಾನಿಯಾಗಿದೆ. ಹಾನಿಯನ್ನು ಸರಿಪಡಿಸುವ ಕೆಲಸ ಇನ್ನಷ್ಟೇ ಆರಂಭವಾಗಬೇಕಿದೆ. ಇದಕ್ಕೆ ಕೆಲವು ದಿನಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಲಕ್ಷಾಂತರ ನಿರಾಶ್ರಿತರು ಶಿಬಿರಗಳಲ್ಲೇ ಉಳಿಯಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

**

*2.71 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ
*46,000 ಟಾರ್ಪಲ್‌ಗಳನ್ನು ಹಂಚಿಕೆ ಮಾಡಲಾಗಿದೆ
*2,473 ಮನೆಗಳು ಧ್ವಂಸವಾಗಿವೆ
*26,000 ಮನೆಗಳಿಗೆ ಭಾಗಶಃ ಹಾನಿಯಾಗಿದೆ
*12 ಜನರು ನಾಪತ್ತೆಯಾಗಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.