ADVERTISEMENT

ಎಚ್‌ಎಎಲ್‌ಗೆ ₹1 ಲಕ್ಷ ಕೋಟಿ ಒಪ್ಪಂದ ನೀಡಿದ್ದು ಸುಳ್ಳಲ್ಲ: ನಿರ್ಮಲಾ ಸೀತಾರಾಮನ್‌

ಏಜೆನ್ಸೀಸ್
Published 7 ಜನವರಿ 2019, 11:43 IST
Last Updated 7 ಜನವರಿ 2019, 11:43 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ‘ದೇಶದ ಪ್ರತಿಷ್ಠಿತ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ಗೆ(ಎಚ್‌ಎಎಲ್‌) ₹1 ಲಕ್ಷ ಕೋಟಿ ಮೊತ್ತದ ಕೆಲಸ ನೀಡಿರುವುದು ಸುಳ್ಳಲ್ಲ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಲೋಕಸಭೆ ಅಧಿವೇಶನದಲ್ಲಿ ಪುನರುಚ್ಚರಿಸಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜೊತೆ ಸತತ ಟ್ವೀಟ್‌ ಸಮರ ನಡೆಸಿದ ರಕ್ಷಣ ಸಚಿವರು, ಅಧಿವೇಶನದಲ್ಲಿ ಎಚ್‌ಎಎಲ್‌ ಕುರಿತಾಗಿ ರಾಹುಲ್‌ ಗಾಂಧಿ ಕೇಳಿದ ಎರಡು ಪ್ರಶ್ನೆಗಳಿಗೆ ಉತ್ತರಿಸಲಿಲ್ಲ ಎಂದು ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

‘2014ರಿಂದ 2018ರವರೆಗೆ ಒಟ್ಟು ₹26,570 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿರುವ ಬಗ್ಗೆ ನನಗೆ ಎಚ್‌ಎಎಲ್‌ನಿಂದ ದೃಢೀಕರಣ ದೊರೆತಿದೆ. ಜೊತೆಗೆ ಇನ್ನೂ ₹73,000 ಕೋಟಿಯ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.

ADVERTISEMENT

‘ಎಚ್‌ಎಎಲ್‌ ಕುರಿತು ನಾನು ನೀಡಿದ ಹೇಳಿಕೆ ಸತ್ಯ ಎನ್ನುವುದನ್ನು ಇದು ನಿರೂಪಿಸುತ್ತದೆ ಹಾಗೂ ನನ್ನ ಹೇಳಿಕೆಯಿಂದ ಹುಟ್ಟಿಕೊಂಡಿದ್ದ ಅನುಮಾನಗಳಿಗೂ ಇದು ಉತ್ತರವಾಗಿದೆ’ ಎಂದು ಹೇಳಿದರು.

ರಕ್ಷಣಾ ಸಚಿವರ ಈ ಹೇಳಿಕೆ ವಿರೋಧ ಪಕ್ಷದವರ ದನಿಯನ್ನು ಅಡಗಿಸುವಲ್ಲಿ ವಿಫಲವಾಯಿತು. ಎಚ್‌ಎಎಲ್‌ ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ. ತನ್ನ ನೌಕರರಿಗೆ ಸಂಬಳ ನೀಡುವುದಕ್ಕೂ ಸಂಸ್ಥೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಸರ್ಕಾರ ಯಾವುದೇ ವಿವರಣೆ ನೀಡಲ್ಲ ಎಂದು ಕಾಂಗ್ರೆಸ್‌ ಮುಖಂಡರು ವಾದಿಸಿದರು. ಈ ಬಗ್ಗೆ ಪತ್ರವೊಂದನ್ನು ಓದಿದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಎಚ್‌ಎಎಲ್‌ ಹಣದ ಅಭಾವವನ್ನು ಎದುರಿಸುತ್ತಿರುವುದು ಸತ್ಯ ಎನ್ನುವುದನ್ನು ಈ ಪತ್ರ ನಿರೂಪಿಸುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಕೆ.ಕೆ.ವೇಣುಗೋಪಾಲ್‌, ‘ಸಂಸತ್ತಿಗೆ ತಪ್ಪು ಮಾಹಿತಿ ನೀಡಿ, ಸದನದ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದರೆ, ರಕ್ಷಣ ಸಚಿವೆ ನಿರ್ಮಲಾ ಸೀತಾರಾಮನ್‌ ಅದರ ಪರಿಣಾಮವನ್ನು ಎದುರಿಸುತ್ತಾರೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.