ADVERTISEMENT

ನೆರೆ ಮನೆಯವನ ಕೊಲ್ಲಲು ಕೋರ್ಟ್‌ಗೇ ಬಾಂಬ್‌ ಇಟ್ಟ ವಿಜ್ಞಾನಿ ಆತ್ಮಹತ್ಯೆಗೆ ಯತ್ನ

ಪಿಟಿಐ
Published 20 ಡಿಸೆಂಬರ್ 2021, 4:27 IST
Last Updated 20 ಡಿಸೆಂಬರ್ 2021, 4:27 IST
ದೆಹಲಿಯ ರೋಹಿಣಿ ಕೋರ್ಟ್‌ ಆವರಣ
ದೆಹಲಿಯ ರೋಹಿಣಿ ಕೋರ್ಟ್‌ ಆವರಣ    

ದೆಹಲಿ: ನೆರೆ ಮನೆಯ ವಕೀಲರೊಬ್ಬರನ್ನು ಕೊಲ್ಲಲು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದೊಳಗೆ ಸ್ಫೋಟಕವಿರಿಸಿದ ಆರೋಪದಲ್ಲಿ ಸೆರೆಯಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿ ಭರತ್‌ ಭೂಷಣ್‌ ಕಟಾರಿಯಾ, ಪೊಲೀಸ್ ವಶದಲ್ಲಿರುವಾಗಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶೌಚಗೃಹದಲ್ಲಿ ಹ್ಯಾಂಡ್ ವಾಶ್ ಕುಡಿದು ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟಾರಿಯಾ ಅವರು ಸದ್ಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಡಿ. 9ರಂದು ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದರು. ಇದರ ಹಿಂದೆ ಕಟಾರಿಯಾ ಕೈವಾಡವಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ಬಂಧಿಸಲಾಗಿದೆ. ಸ್ಫೋಟಕ್ಕೆ ಅವರು ಸುಧಾರಿತ ಐಇಡಿ ಬಳಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಶನಿವಾರ ರಾತ್ರಿ ಕಟಾರಿಯಾ ಶೌಚಗೃಹದಲ್ಲಿ ಹ್ಯಾಂಡ್ ವಾಶ್ ಕುಡಿದಿದ್ದಾರೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಅವರು ವಾಂತಿಯಾಗುತ್ತಿರುವುದಾಗಿಯೂ, ತೀವ್ರ ಹೊಟ್ಟೆ ನೋವು ಇರುವುದಾಗಿಯೂ ತಿಳಿಸಿದ್ದಾರೆ. ಅವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಯಿತು ಮತ್ತು ಅಲ್ಲಿಂದ ಏಮ್ಸ್‌ಗೆ ಕಳುಹಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


‘ಪೊಲೀಸ್ ಸಿಬ್ಬಂದಿ ಅವರನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಲು ಹೋದಾಗ, ಏನನ್ನೂ ಸೇವಿಸಲಿಲ್ಲ ಎಂದು ಕಟಾರಿಯಾ ಹೇಳಿದ್ದರೆ. ಆದರೆ ನಾವು ವೈದ್ಯರೊಂದಿಗೆ ಮಾತನಾಡಿದೆವು. ಕಟಾರಿಯಾ ಹ್ಯಾಂಡ್ ವಾಶ್ ಕುಡಿದಿದ್ದಾರೆ ಎಂದು ಅವರು ಹೇಳಿದರು’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಕರಣದಲ್ಲಿ ಸಿಕ್ಕಿಬಿದ್ದರೆ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕಟಾರಿಯಾ ಮೊದಲೇ ತಯಾರಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಮೂಲಕ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಅತ್ಯಂತ ಜಾಣತನದಲ್ಲಿ ವರ್ತಿಸುತ್ತಿದ್ದಾರೆ. ತನಿಖೆಗೆ ಸಹಕಾರ ತೋರುತ್ತಿಲ್ಲ. ವ್ಯವಸ್ಥೆಯ ಬಗ್ಗೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದು, ಅವುಗಳನ್ನೆಲ್ಲ ಬಳಸಿಕೊಂಡು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.