ADVERTISEMENT

ಮೊದಲ ಪಂದ್ಯದಲ್ಲಿ ಜಯ, ಸರಣಿ ಗೆಲುವಷ್ಟೇ ಬಾಕಿ: ದೆಹಲಿ ಗಡಿಗಳಲ್ಲಿರುವ ರೈತರ ಮನದಾಳ

ಸಿದ್ದಯ್ಯ ಹಿರೇಮಠ
Published 19 ನವೆಂಬರ್ 2021, 20:36 IST
Last Updated 19 ನವೆಂಬರ್ 2021, 20:36 IST
ಗಾಜಿಯಾಬಾದ್‌ನಲ್ಲಿ ಶುಕ್ರವಾರ ಜಿಲೇಬಿ ಹಂಚುವ ಮೂಲಕ ರೈತರು ಸಂಭ್ರಮ ಆಚರಿಸಿದರು  –ಎಎಫ್‌ಪಿ ಚಿತ್ರ
ಗಾಜಿಯಾಬಾದ್‌ನಲ್ಲಿ ಶುಕ್ರವಾರ ಜಿಲೇಬಿ ಹಂಚುವ ಮೂಲಕ ರೈತರು ಸಂಭ್ರಮ ಆಚರಿಸಿದರು  –ಎಎಫ್‌ಪಿ ಚಿತ್ರ   

ನವದೆಹಲಿ: ‘ಸರ್ಕಾರ್ ಕೀ ಖಿಲಾಫ್‌ ಹಮಾರೀ ಲಡಾಯಿ ಜಾರೀ ರಹೇಗಿ. ಪೂರೇ ಜೀತ್ ಕೇ ಬಾದ್ ಹೀ ಜಂಗ್‌ ಖತ್ಮ್ ಕರೇಂಗೇ’ (ಸರ್ಕಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಪೂರ್ಣ ಗೆಲುವು ದೊರೆತ ನಂತರವೇ ಯುದ್ಧ ಮುಗಿಸಲಿದ್ದೇವೆ).

ಮೂರು ಕೃಷಿ ಕಾಯ್ದೆಗಳ ರದ್ದತಿ ಕುರಿತ ಪ್ರಧಾನಿಯವರ ಘೋಷಣೆಗೆ ಸಂಬಂಧಿಸಿದಂತೆ ದೆಹಲಿಯ ಗಡಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟಗಾರರ ಮೊದಲ ಪ್ರತಿಕ್ರಿಯೆ ಇದು.

ದೆಹಲಿಯಿಂದ ಪಂಜಾಬ್‌ಗೆ ಸಂಪರ್ಕ ಕಲ್ಪಿಸುವ ‘ಸಿಂಘು’ ಗಡಿ, ಉತ್ತರ ಪ್ರದೇಶದ ಭಾಗದ ‘ಗಾಜಿಪುರ’ ಗಡಿ, ರಾಷ್ಟ್ರ ರಾಜಧಾನಿಯೊಂದಿಗೆ ಹರಿಯಾಣವನ್ನು ಸಂಪರ್ಕಿಸುವ ‘ಟಿಕ್ರಿ’ ಗಡಿಗಳಲ್ಲಿ ಗಾಳಿ, ಮಳೆ, ಬಿಸಿಲು, ಚಳಿ ಎನ್ನದೇ ರೈತರು ನಡೆಸುತ್ತಿರುವ ಹೋರಾಟ ಕೆಲವೇ ದಿನಗಳಲ್ಲಿ (ನವೆಂಬರ್‌ 26) ಒಂದ ವರ್ಷ ಪೂರೈಸಲಿದೆ. ಶುಕ್ರವಾರದ ಘೋಷಣೆ ರೈತರ ಮುಖದಲ್ಲಿ ‘ಮಂದಹಾಸ’ ಮೂಡಿಸಿದ್ದರೂ, ಸಂಪೂರ್ಣ ‘ಸಮಾಧಾನ’ವನ್ನು ತಂದಿಲ್ಲ.

ADVERTISEMENT

ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧದ ಅಸಮಾಧಾನ ಪ್ರತಿ ಪ್ರತಿಭಟನಕಾರನಲ್ಲೂ ಎದ್ದು ಕಾಣುತ್ತಲೇ ಇದೆ. ಹೋರಾಟಗಾರರು ಪರಸ್ಪರ ‘ಸಿಹಿ’ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರಾದರೂ, ಈ ಗೆಲುವಿಗೆ ಕಾರಣವಾದ ‘ಆಂದೋಲನ’ ತಮ್ಮ ಇತರ ಬೇಡಿಕೆಗಳ ಈಡೇರಿಕೆಗೆ ‘ಮುನ್ನುಡಿ’ಯಾಗಬೇಕು ಎಂಬ ಕೆಚ್ಚು ಅವರಲ್ಲಿ ಕಂಡುಬಂತು.

‘ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಯಾರೂ ನಿರೀಕ್ಷೆ ಮಾಡದ ಸಮಯದಲ್ಲಿ, ಶುಕ್ರವಾರ ಬೆಳಿಗ್ಗೆ ಪ್ರಧಾನಿಯವರು ಕಾಯ್ದೆ ರದ್ದತಿಯ ಘೋಷಣೆ ಮಾಡಿದ್ದಾರೆ. ಇದು ನಮ್ಮ ಮೊದಲ ಜಯ. ಇನ್ನಷ್ಟು ಗೆಲುವುಗಳು ಬಾಕಿ ಇವೆ’ ಎಂದು ಟಿಕ್ರಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ರೈತ ಮುಖಂಡ ವೀರೇಂದರ್‌ ಸಿಂಗ್‌ ಹೂಡಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಪ್ರಾರಂಭಿಕ ಗೆಲುವು ದಕ್ಕಿದೆ. ಆದರೂ ನಾವೆಲ್ಲ ಮೈಮರೆಯುವ ಸಮಯವಿದಲ್ಲ. ಹೋರಾಟದಲ್ಲಿ ಭಾಗಿಯಾದ ಲಕ್ಷಲಕ್ಷ ರೈತರ ವಿರುದ್ಧ ಉತ್ತರ ಪ್ರದೇಶ, ಹರಿಯಾಣ ಮತ್ತಿತರ ಕಡೆ ಇಲ್ಲಸಲ್ಲದ ಆರೋಪ ಹೊರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆ ರದ್ದುಪಡಿಸಿದ ರೀತಿಯಲ್ಲೇ ಆ ಪ್ರಕರಣಗಳನ್ನೂ ಹಿಂದಕ್ಕೆ ಪಡೆಯಬೇಕು’ ಎಂಬ ಒಕ್ಕೊರಲಿನ ಮನವಿಯೂ ಈ ಗಡಿಗಳಲ್ಲಿ ಠಿಕಾಣಿ ಹೂಡಿರುವ ರೈತ ಸಂಘಟನೆಗಳ ಸದಸ್ಯರದ್ದಾಗಿದೆ.

‘ಪ್ರಧಾನಿಯಾದವರು ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಸಾಧಕ– ಬಾಧಕಗಳ ಬಗ್ಗೆ ಚಿಂತನೆ ನಡೆಸಬೇಕು. ಕಳೆದ ವರ್ಷವೇ ನಮ್ಮ ಬೇಡಿಕೆ ಈಡೇರಿದ್ದರೆ ಪ್ರತಿಭಟನೆಯಲ್ಲಿ ಭಾಗಿಯಾದ 750ಕ್ಕೂ ಹೆಚ್ಚು ರೈತರು ಹುತಾತ್ಮರಾಗುವುದು ತಪ್ಪುತ್ತಿತ್ತು. ಸಂಕಷ್ಟಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವುದನ್ನೂ ತಪ್ಪಿಸಬಹುದಿತ್ತು’ ಎಂಬುದೂ ಅವರ ಅನಿಸಿಕೆಯಾಗಿದೆ.

‘ಕೃಷಿ ಉತ್ತನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಖಾತರಿ ದೊರೆಯಬೇಕಿದೆ. ನಮ್ಮ ಹೋರಾಟದ ಮೂಲವಾದ ಈ ಬೇಡಿಕೆ ಈಡೇರುವವರೆಗೆ ವಿರಮಿಸುವ ಮಾತೇ ಇಲ್ಲ. ಕ್ರಿಕೆಟ್‌ ಭಾಷೆಯಲ್ಲಿ ಹೇಳುವುದಾದರೆ, ಈಗ ಮೊದಲ ಪಂದ್ಯವನ್ನಷ್ಟೇ ನಾವು ಗೆದ್ದಿದ್ದೇವೆ. ಸರಣಿ ಗೆಲ್ಲುವುದು ಬಾಕಿ ಇದೆ. ಗೆದ್ದೇ ತೀರುತ್ತೇವೆ’ ಎಂದು ರೋಷದಿಂದ ಹೇಳಿದವರು ಸಿಂಘು ಗಡಿಯಲ್ಲಿನ ಪ್ರತಿಭಟನೆಯ ನೇತೃತ್ವವಹಿಸಿರುವ ಧೀರಜ್‌ ಗಾಬಾ.

‘ದೆಹಲಿಯ ವಾಯು ಮಾಲಿನ್ಯಕ್ಕೆ ರೈತರನ್ನೇ ಹೊಣೆ ಮಾಡಲಾಗುತ್ತಿದೆ. ಅವರ ಜಮೀನಿನಲ್ಲಿನ ಕೃಷಿ ತ್ಯಾಜ್ಯ ಸುಡುತ್ತಿರುವುದರಿಂದ ದೆಹಲಿಯ ಆಗಸದಲ್ಲಿ ದಟ್ಟ ಹೊಗೆ ಆವರಿಸುತ್ತಿದೆ ಎಂಬ ಆರೋಪವೂ ಇದೆ. ಕಾರ್ಖಾನೆಗಳು, ವಾಹನಗಳು, ಹೊಗೆ ಉಗುಳುತ್ತಿವೆ. ದೀಪಾವಳಿಯ ವೇಳೆ ಪಟಾಕಿ ಸುಡುವುದರಿಂದ ವಿಷಾನಿಲ ಹೊರಹೊಮ್ಮುತ್ತಿದೆ. ಆದರೂ ಮುಗ್ಧ ರೈತರನ್ನೇ ದೂಷಿಸುವ ಕೆಲಸ ಆಗುತ್ತಿದೆ. ಮಾಲಿನ್ಯ ನಿಯಂತ್ರಣದ ಸಂಬಂಧವೂ ಸೂಕ್ತ ಕಾನೂನು ತಂದು ರೈತರನ್ನು ದೋಷಮುಕ್ತರನ್ನಾಗಿಬೇಕು’ ಎಂದು ಕೋರಿದವರು ಒಂದು ದಿನವೂ ಮನೆಯತ್ತ ತೆರಳದೆ ಸತತವಾಗಿ ಪ್ರತಿಭಟನೆಯ ಭಾಗವಾಗಿರುವ ಗುರುಮೀತ್‌ ಮಂಗಟ್‌.

ಈ ಗಡಿಗಳಲ್ಲಿನ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಫ್ಲೈ ಓವರ್‌ಗಳ ಕೆಳಗೆ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಟೆಂಟ್‌ಗಳಲ್ಲಿ ದೆಹಲಿಯ ಬಿಸಿಲು ಮತ್ತು ಚಳಿಯನ್ನು ಲೆಕ್ಕಿಸದೆ, ಹಗಲು– ರಾತ್ರಿ ಕಳೆದಿರುವ ವೃದ್ಧರು, ಮಹಿಳೆಯರು, ಯುವ ರೈತರು ಪ್ರಧಾನಿ ಘೋಷಣೆಯಿಂದ ಪುಳಕಿತರಾಗಿದ್ದಾರೆ. ತಮ್ಮ ಕುಟುಂಬ ಸದಸ್ಯರ ಮುಖ ನೋಡಬೇಕೆಂಬ ಕಾತರ ಅವರಲ್ಲಿದೆ.

ಆದರೂ, ಸಂಪೂರ್ಣ ಗೆಲುವು ಲಭಿಸುವವರೆಗೆ ಪ್ರತಿಭಟನೆ ಮುಂದುವರಿಸಬೇಕೆಂಬ ರೈತ ಮುಖಂಡರ ನಿರ್ಣಯಕ್ಕೆ ಬದ್ಧರಾಗಿ ಇರುವುದಕ್ಕೆಂದೇ ಅದನ್ನು ಅದುಮಿಟ್ಟುಕೊಂಡು ಅಲ್ಲೇ ಇನ್ನಷ್ಟು ದಿನ ತಂಗುವ ನಿರ್ಧಾರಕ್ಕೆ ಬಂದಿದ್ದಾರೆ. ನವೆಂಬರ್‌ 29ರಂದು ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ, ಕೃಷಿ ಕಾಯ್ದೆಯ ರದ್ದತಿ ಕುರಿತ ನಿರ್ಣಯ ಹೊರಬೀಳುವ ದಿನದವರೆಗೂ ಕಾಯಬೇಕೆಂಬ ಛಲ ಅವರನ್ನು ಅಲ್ಲಿಯೇ ಹಿಡಿದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.