
ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನವದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಮುಖ್ಯ ಆರೋಪಿ ಅಮೀರ್ ರಷೀದ್ ಅಲಿಯನ್ನು ಸೋಮವಾರ ಭದ್ರತಾ ಪಡೆಗಳು ಹಾಜರುಪಡಿಸಿದರು–ಪಿಟಿಐ ಚಿತ್ರ
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟಕ್ಕೆ ಸಂಬಂಧಿಸಿ ಅಮೀರ್ ರಷೀದ್ ಅಲಿ ಪ್ರಮುಖ ಆರೋಪಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
ಈತನೇ ಆತ್ಮಹತ್ಯಾ ಬಾಂಬರ್‌ಗಳಿಗೆ ಸುರಕ್ಷಿತವಾದ ಮನೆ ಒದಗಿಸಿದ್ದ. ಅಲ್ಲದೇ, ಕಾರಿನಲ್ಲಿ ಬಾಂಬ್ ಸ್ಫೋಟಿಸಿದ್ದ ಡಾ. ಉಮರ್ ನಬಿಗೆ ಬೇಕಾದ ಸಾಮಗ್ರಿಗಳನ್ನು ಸಾಗಿಸಲು ವ್ಯವಸ್ಥೆ ಮಾಡಿದ್ದ ಎಂದು ತಿಳಿಸಿದೆ.
ದಕ್ಷಿಣ ಕಾಶ್ಮೀರದ ಪಾಂಪೋರ್ ನಿವಾಸಿಯಾದ ಅಮೀರ್ ರಷೀದ್ ಅಲಿಯನ್ನು ಪಾಟಿಯಾಲ ಹೌಸ್ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಂಜು ಬಜಾಜ್ ಚಂದನಾ ಮುಂದೆ ಹಾಜರಪಡಿಸಲಾಯಿತು. ನ್ಯಾಯಾಲಯದ ಆವರಣದ ಒಳಗೆ ಪ್ರವೇಶಿಸದಂತೆ ಮಾಧ್ಯಮದ ಪ್ರತಿನಿಧಿಗಳಿಗೆ ನಿರ್ಬಂಧ ವಿಧಿಸಲಾಯಿತು. ನ್ಯಾಯಾಲಯದ ಹೊರಭಾಗದಲ್ಲಿ ದೆಹಲಿ ಪೊಲೀಸರು ಹಾಗೂ ಕ್ಷಿಪ್ರಕಾರ್ಯಪಡೆಯವರು ಗರಿಷ್ಠ ಭದ್ರತೆ ಒದಗಿಸಿದ್ದರು.
ಇಡೀ ಸಂಚಿನ ಮಾಹಿತಿಯನ್ನು ಆರೋಪಿಯಿಂದ ಕಲೆಹಾಕಲು ವಶಕ್ಕೆ ನೀಡಬೇಕು ಎಂದು ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸ್ಫೋಟಕ್ಕೆ ಬಳಸಿದ ಕಾರು ಅಲಿ ಹೆಸರಿನಲ್ಲಿ ನೋಂದಣಿಯಾಗಿದೆ. ಈತನೇ ಸ್ಫೋಟ ನಡೆಸಿದ ಡಾ.ಉಮರ್ ನಬಿಗೆ ಎಲ್ಲ ರೀತಿಯ ಸಾಗಣೆಯ ನೆರವು ನೀಡಿದ್ದ, ಸ್ಫೋಟಕ್ಕೂ ಮುನ್ನ ಉಮರ್‌ಗೆ ಸುರಕ್ಷಿತ ಮನೆಯನ್ನು ವ್ಯವಸ್ಥೆ ಮಾಡಿಕೊಟ್ಟಿದ್ದ ಎಂದು ನ್ಯಾಯಾಲಯದ ಗಮನಸೆಳೆದರು. ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಾಶ್ಮೀರಕ್ಕೆ ಕರೆದೊಯ್ಯಬೇಕಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ಅಧಿಕಾರಿಗಳ ಮನವಿಯನ್ನು ಪುರಷ್ಕರಿಸಿದ ನ್ಯಾಯಾಧೀಶರು ಆರೋಪಿಯನ್ನು 10 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.