ನವದೆಹಲಿ: ತನ್ನ ಫೋನ್ ಕರೆಯನ್ನು ಸ್ವೀಕರಿಸಲಿಲ್ಲ ಎನ್ನುವ ಕಾರಣಕ್ಕೆ ರೆಸ್ಟೋರೆಂಟ್ ಮ್ಯಾನೇಜರ್‌ಗೆ ದೆಹಲಿ ಪೊಲೀಸ್ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಥಳಿಸಿರುವ ಘಟನೆ ನಡೆದಿದೆ.
ಹಜರತ್ ನಿಜಾಮುದ್ದಿನ್ ರೈಲ್ವೆ ನಿಲ್ದಾಣದ ಬಳಿಯಿರುವ ರೆಸ್ಟೋರೆಂಟ್ ಮ್ಯಾನೇಜರ್ ಶಿವಂ ತುಕ್ರಾಲ್‌ನನ್ನು ನವೆಂಬರ್ 21ರಂದು ಮುಕೇಶ್ ಹಿಗ್ಗಾಮುಗ್ಗ ಥಳಿಸಿದ್ದಾರೆ. ಎಎಸ್‌ಐ ಮುಕೇಶ್ ವಿರುದ್ಧ ಸೋಮವಾರ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಕ್ರಾಲ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿರುವಂತೆ, ಮುಕೇಶ್ ಉಚಿತವಾಗಿ ಫುಡ್ ಆರ್ಡರ್ ಮಾಡಿದ್ದರು. ಅದಾದ 20 ನಿಮಿಷಕ್ಕೆ ಆರ್ಡರ್ ನೀಡಲಾಗಿತ್ತು. ತಡವಾಗಿ ನೀಡಿದ್ದೇನೆ ಎಂದು ಎಎಸ್ಐ ಕರೆ ಮಾಡಿದ್ದರು. ಇತರೆ ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತಿದ್ದ ಕಾರಣ ಕರೆ ಸ್ವೀಕರಿಸಲು ಆಗಿರಲಿಲ್ಲ. ಕರೆ ಸ್ವೀಕರಿಸಿಲ್ಲ ಎನ್ನುವ ಕಾರಣಕ್ಕಾಗಿ ಎಎಸ್‌ಐ ಮುಕೇಶ್ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದಾರೆ. ಅಲ್ಲಿಗೆ ತೆರಳಿದಾಗ ತುಕ್ರಾಲ್ ಕೈಗಳನ್ನು ಕಟ್ಟಿಹಾಕಿ ಕಪಾಳಕ್ಕೆ ಹೊಡೆದು, ಕೋಲಿನಿಂದ ಥಳಿಸಿದ್ದಾರೆ. ಖಾಸಗಿ ಅಂಗಗಳಿಗೂ ಒದೆದಿದ್ದಾರೆ. ಅಲ್ಲದೆ ತುಕ್ರಾಲ್ ಬಳಿಯಿದ್ದ ಹಣ ಮತ್ತು ಮೊಬೈಲ್ ಕಸಿದುಕೊಂಡು ಠಾಣೆಯಿಂದ ಹೊರಬರುವಾಗ ಹಿಂತಿರುಗಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ರೆಸ್ಟೋರೆಂಟ್ ಮ್ಯಾನೇಜರ್ ತುಕ್ರಾಲ್, ಎರಡೂವರೆ ನಿಮಿಷದ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ತನಗಾದ ದೌರ್ಜನ್ಯವನ್ನು ಹೇಳಿಕೊಂಡಿದ್ದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಎಸ್‌ಐ ಮುಕೇಶ್‌ರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಈ ರೀತಿಯ ಯಾವುದೇ ಘಟನೆಗಳಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.