ADVERTISEMENT

ಸಿಸೋಡಿಯಾ ಇದೇ 17ರ ವರೆಗೆ ಇ.ಡಿ ವಶಕ್ಕೆ

ದೆಹಲಿ ಅಬಕಾರಿ ನೀತಿ ಹಗರಣ

ಪಿಟಿಐ
Published 10 ಮಾರ್ಚ್ 2023, 19:32 IST
Last Updated 10 ಮಾರ್ಚ್ 2023, 19:32 IST
ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ಶುಕ್ರವಾರ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಕರೆತರಲಾಯಿತು –ಪಿಟಿಐ
ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ಶುಕ್ರವಾರ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಕರೆತರಲಾಯಿತು –ಪಿಟಿಐ   

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯವು ಮಾರ್ಚ್‌ 17ರ ವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿದೆ.

10 ದಿನಗಳ ಕಾಲ ಸಿಸೋಡಿಯಾ ಅವರನ್ನು ವಶಕ್ಕೆ ನೀಡಬೇಕೆಂದು ಇ.ಡಿ. ಪರ ವಕೀಲ ಜೊಹೆಬ್ ಹೊಸೈನ್ ನ್ಯಾಯಾಲಯವನ್ನು ಕೋರಿದ್ದರು. ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್‌ಪಾಲ್‌ ಅವರು ಏಳು ದಿನಗಳ ಕಾಲ ವಶಕ್ಕೆ ನೀಡಿ ಆದೇಶ ನೀಡಿದರು.

‘ಹಗರಣದ ಕುರಿತು ಸಿಸೋಡಿಯಾ ಅವರು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಪ್ರಕರಣದ ಇತರ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಅಗತ್ಯ ಇದೆ’ ಎಂದು ಜೊಹೆಬ್ ಹೊಸೈನ್ ಹೇಳಿದರು.

ADVERTISEMENT

‘ಸಿಸೋಡಿಯಾ ಅವರು ತಮ್ಮ ಮೊಬೈಲ್ ಅನ್ನು ನಾಶಪಡಿಸಿದ್ದು, ಇದು ಪ್ರಮುಖ ಸಾಕ್ಷ್ಯವಾಗಿತ್ತು’ ಎಂದೂ ನ್ಯಾಯಾಲಯಕ್ಕೆ ವಿವರಿಸಿದರು.

ಹಣ ಅಕ್ರಮ ವರ್ಗಾವಣೆ ಜಾಲದ ಜೊತೆ ಸಿಸೋಡಿಯಾ ಅವರಿಗೆ ನಂಟಿದೆ ಮತ್ತು ಹವಾಲ ಮೂಲಗಳ ಮೂಲಕ ಹರಿದು ಬಂದಿರುವ ಹಣದ ಕುರಿತು ತನಿಖೆ ನಡೆಸಲಾಗುವುದು ಎಂದೂ ವಕೀಲರು ಹೇಳಿದ್ದಾರೆ.

‘ಅಬಕಾರಿ ನೀತಿಯನ್ನು ಲೆಫ್ಟಿನೆಂಟ್‌ ಗವರ್ನರ್‌ ಒಪ್ಪಿಕೊಂಡಿದ್ದರು ಮತ್ತು ಅವರು ಅದನ್ನು ಪರಿಶೀಲಿಸಿರುತ್ತಾರೆ’ ಎಂದು ಸಿಸೋಡಿಯಾ ಅವರ ಪರ ಹಾಜರಾಗಿದ್ದ ಹಿರಿಯ ವಕೀಲರಾದ ದಯನ್‌ ಕೃಷ್ಣನ್‌, ಮೋಹಿತ್‌ ಮಾಥುರ್‌ ಮತ್ತು ಸಿದ್ಧಾರ್ಥ ಅಗರ್‌ವಾಲ್‌ ನ್ಯಾಯಾಲಯಕ್ಕೆ ತಿಳಿಸಿದರು.

‘ಈ ಪ್ರಕರಣದಲ್ಲಿ ಸಿಸೋಡಿಯಾ ಅವರ ವಿರುದ್ಧ ಇ.ಡಿ.ಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ’ ಎಂದರು.

ಬಿಗಿ ಭದ್ರತೆ: ಸಿಸೋಡಿಯಾ ಅವರನ್ನು ಹಾಜರುಪಡಿಸಿರುವ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಬಿಗಿ ಪೋಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಆಮ್‌ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ನ್ಯಾಯಾಲಯದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿ ಸಿಸೋಡಿಯಾ ಅವರ ಪರವಾಗಿ ಘೋಷಣೆ ಕೂಗಿದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಇ.ಡಿ ಅಧಿಕಾರಿಗಳು ಸಿಸೋಡಿಯಾ ಅವರನ್ನು ಗುರುವಾರ ತಿಹಾರ್‌ ಜೈಲಿನಲ್ಲಿ ಬಂಧಿಸಿದ್ದರು.

ಪ್ರಹ್ಲಾದಗೆ ಹೋಲಿಸಿದ ಕೇಜ್ರಿವಾಲ್‌: ದೇಶಕ್ಕಾಗಿ ಮತ್ತು ಮಕ್ಕಳಿಗಾಗಿ ಸೇವೆ ಸಲ್ಲಿಸುವವರನ್ನು ಜೈಲಿಗೆ ಅಟ್ಟಲಾಗುತ್ತಿದೆ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಈಚೆಗೆ ಮನೀಷ್‌ ಸಿಸೋಡಿಯಾ ಅವರನ್ನು ಬಂಧಿಸಿರುವುದನ್ನು ಹಿರಣ್ಯಕಶಿಪು ಮತ್ತು ಪ್ರಹ್ಲಾದ ಕತೆಗೆ ಹೋಲಿಸಿದ್ದಾರೆ.

ದೇವರನ್ನು ಪೂಜಿಸದಂತೆ ಹಿರಣ್ಯಕಶಿಪುಗೆ ಪ್ರಹ್ಲಾದನನ್ನು ತಡೆಯಲು ಸಾಧ್ಯವಾಗಿಲ್ಲವೋ ಹಾಗೆಯೇ ಆಧುನಿಕ ಪ್ರಹ್ಲಾದನನ್ನೂ ತಡೆಯಲಾಗದು ಎಂದು ಟ್ವೀಟ್‌ ಮಾಡಿದ್ದಾರೆ.

ಭ್ರಷ್ಟಾಚಾರ ಉತ್ತೇಜಿಸುತ್ತಿರುವ ಕೇಜ್ರಿವಾಲ್‌: ಅರವಿಂದ ಕೇಜ್ರಿವಾಲ್‌ ಅವರು ದೆಹಲಿ ಮತ್ತು ಪಂಜಾಬ್‌ನಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದ ಪಕ್ಷವು ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿರುವ ತನ್ನ ಮುಖಂಡರ ರಕ್ಷಣೆಗೆ ನಿಂತಿರುವುದು ವಿಪರ್ಯಾಸ ಎಂದೂ ಕಾಂಗ್ರೆಸ್‌ ಮುಖಂಡರಾದ ಅಲ್ಕಾ ಲಂಬಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.