ADVERTISEMENT

ದೆಹಲಿ ಬೆಂಕಿ ಅವಘಡ: 33 ಮಂದಿ ಇನ್ನೂ ನಾಪತ್ತೆ

ಸಾವಿನ ಸಂಖ್ಯೆ ಹೆಚ್ಚಳವಾಗುವ ಶಂಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 20:35 IST
Last Updated 14 ಮೇ 2022, 20:35 IST
ದೆಹಲಿಯ ಬೆಂಕಿ ಅವಘಡದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ರೋದನ --  ಪಿಟಿಐ ಚಿತ್ರ
ದೆಹಲಿಯ ಬೆಂಕಿ ಅವಘಡದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ರೋದನ --  ಪಿಟಿಐ ಚಿತ್ರ   

ನವದೆಹಲಿ: ದೆಹಲಿಯ ಮುಂಡ್ಕಾದಲ್ಲಿ ಶುಕ್ರವಾರ ನಡೆದ ಬೆಂಕಿ ಅವಘಡದ ಬಳಿಕ ಇನ್ನೂ 33 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವಘಡದಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಕರಕಲಾದ ಮೃತದೇಹದ ಭಾಗಗಳುಶನಿವಾರವೂ ಸಿಕ್ಕಿವೆ. ಹಾಗಾಗಿ ಸಾವಿನ ಸಂಖ್ಯೆಯು ಇನ್ನಷ್ಟು ಹೆಚ್ಚಬಹುದು. ಜನರು ತಮ್ಮ ಸಂಬಂಧಿಕರಿಗಾಗಿ ಹುಡುಕಾಡುತ್ತಿರುವ ದೃಶ್ಯ ಕಂಡು ಬಂತು.

ಗಾಯಗೊಂಡ 12 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ಸುರಕ್ಷತೆ ಪ್ರಮಾಣಪತ್ರ ಇರಲಿಲ್ಲ. ಒಳ ಹೋಗಲು ಮತ್ತು ಹೊರ ಬರಲು ಒಂದು ಬಾಗಿಲು ಮಾತ್ರವೇ ಇತ್ತು. ಹಾಗಾಗಿಯೇ ಸಾವಿನ ಸಂಖ್ಯೆ ಹೆಚ್ಚಳವಾಯಿತು ಎಂದು ಮುಖ್ಯ ಆಗ್ನಿಶಾಮಕ ಅಧಿಕಾರಿ ಅತುಲ್‌ ಗರ್ಗ್‌ ಹೇಳಿದ್ದಾರೆ.

ಹವಾನಿಯಂತ್ರಕದಲ್ಲಿನ ಸ್ಫೋಟವು ಬೆಂಕಿಗೆ ಕಾರಣ ಆಗಿರಬಹುದು ಎಂಬ ಶಂಕೆ ಇದೆ. ಶನಿವಾರ ಸಿಕ್ಕಿದ ದೇಹದ ಭಾಗಗಳು ಒಬ್ಬ ವ್ಯಕ್ತಿಯದ್ದೇ ಅಥವಾ ಒಂದಕ್ಕಿಂತ ಹೆಚ್ಚು ಜನರದ್ದೇ ಎಂಬುದನ್ನು ದೃಢಪಡಿಸಿಕೊಳ್ಳುವುದು ಕಷ್ಟ ಎಂದು ಗರ್ಗ್‌ ತಿಳಿಸಿದ್ದಾರೆ.

ADVERTISEMENT

ಸಿ.ಸಿ.ಟಿ.ವಿ. ಕ್ಯಾಮೆರಾ ಮತ್ತು ರೌಟರ್‌ಗಳನ್ನು ತಯಾರಿಸುವ ಮತ್ತು ಜೋಡಿಸುವ ಕಂಪನಿಯು ಈ ಕಟ್ಟಡದಲ್ಲಿತ್ತು. ಎಲ್ಲ ನಾಲ್ಕು ಅಂತಸ್ತುಗಳೂ ಈ ಕಂಪನಿಯ ಬಳಿಯೇ ಇತ್ತು. ಕಂಪನಿಯ ಮಾಲೀಕರಾದ ಹರೀಶ್‌ ಗೋಯಲ್ ಮತ್ತು ಅವರ ತಮ್ಮ ವರುಣ್‌ ಗೋಯಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಡದ ಮಾಲೀಕ ಮನೀಶ್‌ ಲಾಕ್ರಾ ಅವರ
ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು ಎಂದು ಕೇಜ್ರಿವಾಲ್‌ ಘೋಷಿಸಿದ್ದಾರೆ. ಡಿಎನ್‌ಎ ಪರೀಕ್ಷೆ ಮೂಲಕ ಮೃತದೇಹಗಳನ್ನು ಗುರುತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೃತರಲ್ಲಿ ಎಂಟು ಮಂದಿಯನ್ನು ಗುರುತಿಸಲು ಮಾತ್ರ ಈವರೆಗೆ ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.