ADVERTISEMENT

ದೆಹಲಿ: ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು 2,500 ಮಾರ್ಷಲ್‌ಗಳ ನಿಯೋಜನೆ

ಪಿಟಿಐ
Published 19 ಅಕ್ಟೋಬರ್ 2020, 12:04 IST
Last Updated 19 ಅಕ್ಟೋಬರ್ 2020, 12:04 IST
ದೆಹಲಿ ವಾಹನ ದಟ್ಟಣೆ (ಸಂಗ್ರಹ ಚಿತ್ರ)
ದೆಹಲಿ ವಾಹನ ದಟ್ಟಣೆ (ಸಂಗ್ರಹ ಚಿತ್ರ)   

ನವದೆಹಲಿ: ದೆಹಲಿ ಸರ್ಕಾರವು ‘ರೆಡ್‌ ಲೈಟ್‌ ಆನ್‌, ಗಾಡಿ ಆಫ್‌’ ಎಂಬ ಮಾಲಿನ್ಯ ವಿರೋಧಿ ಅಭಿಯಾನದಡಿ ಜನರಲ್ಲಿ ಜಾಗೃತಿ ಮೂಡಿಸಲು ನಗರದಾದ್ಯಂತ 2,500 ಪರಿಸರ ಮಾರ್ಷಲ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ ಎಂದು ಪರಿಸರ ಸಚಿವ ಗೋಪಾಲ್‌ ರೈ ಅವರು ಸೋಮವಾರ ತಿಳಿಸಿದರು.

‘ದೆಹಲಿಯ 11 ಜಿಲ್ಲೆಯ 100 ಟ್ರಾಫಿಕ್‌ ಸಿಗ್ನಲ್‌ಗಳ ಬಳಿ ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತದೆ. ಈ ಅಭಿಯಾನಕ್ಕಾಗಿ ಎರಡು ನಿಮಿಷಕ್ಕಿಂತ ಕಡಿಮೆ ಅವಧಿ ಹೊಂದಿರುವ ಸಿಗ್ನಲ್‌ಗಳನ್ನು ಆರಿಸಲಾಗಿದೆ. ಅ.21 ರಿಂದ ನ.15 ತನಕ ‘ರೆಡ್‌ ಲೈಟ್ ಆನ್‌, ಗಾಡಿ ಆಫ್‌’ ಅಭಿಯಾನ ನಡೆಯಲಿದೆ’ ಎಂದು ಅವರು ಹೇಳಿದರು.

‘ಪರಿಸರ ಮಾರ್ಷಲ್‌ಗಳು ‘ಗಾಂಧಿಗಿರಿ’ ತತ್ವವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ರೆಡ್‌ ಲೈಟ್‌ ವೇಳೆ ಎಂಜಿನ್‌ ಆಫ್‌ ಮಾಡುವವರಿಗೆ ಮಾರ್ಷಲ್‌ಗಳು ಕೆಂಪು ಗುಲಾಬಿ ನೀಡುತ್ತಾರೆ. ಪರಿಸರ ರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪರಿಸರ ಮಾಲಿನ್ಯದ ವಿರುದ್ದ ಅವರು ಹೇಗೆ ಹೋರಾಡಬಹುದು ಎಂಬುದನ್ನು ಮಾರ್ಷ್‌ಲ್‌ಗಳು ವಿವರಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಸಚಿವರು, ಶಾಸಕರು ಮತ್ತು ರಾಜಕೀಯ ನಾಯಕರಲ್ಲಿ ಈ ಅಭಿಯಾನದಲ್ಲಿ ಭಾಗಿಯಾಗುವಂತೆ ಗೋಪಾಲ್‌ ರೈ ಅವರು ಮನವಿ ಮಾಡಿದ್ದಾರೆ.

ಅ.15 ರಂದು ‘ರೆಡ್‌ ಲೈಟ್‌ ಆನ್‌, ಗಾಡಿ ಆಫ್‌’ ಅಭಿಯಾನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಚಾಲನೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.