ADVERTISEMENT

ಕೆಲಸ ಹುಡುಕುವವರ ಮತ್ತು ಉದ್ಯೋಗದಾತರ ನೆರವಿಗೆ ಪೋರ್ಟಲ್ ಆರಂಭಿಸಿದ ದೆಹಲಿ ಸರ್ಕಾರ

ಏಜೆನ್ಸೀಸ್
Published 27 ಜುಲೈ 2020, 13:06 IST
Last Updated 27 ಜುಲೈ 2020, 13:06 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ಕೆಲಸ ಹುಡುಕುವವರ ಮತ್ತು ಉದ್ಯೋಗದಾತರ ನಡುವಣ ಸಹಕಾರಕ್ಕಾಗಿ ದೆಹಲಿ ಸರ್ಕಾರ ವೆಬ್ ಪೋರ್ಟಲ್ ಆರಂಭಿಸಿದೆ. ಇದಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಚಾಲನೆ ನೀಡಿದ್ದಾರೆ.

‘ಈಗ ನಿರ್ಮಾಣ ಕೆಲಸಗಳು ಆರಂಭವಾಗಿದೆ, ಆದರೆ ಕಾರ್ಮಿಕರು ಸಿಗುತ್ತಿಲ್ಲ. ಉದ್ಯೋಗ ಕಳೆದುಕೊಂಡವರಿಗೆ ಹೊಸ ನೌಕರಿ ಹುಡುಕಲು ಸಾಧ್ಯವಾಗುತ್ತಿಲ್ಲ. ಕೆಲಸ ಹುಡುಕುವವರ ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸುವುದಕ್ಕಾಗಿ jobs.delhi.gov.in ವೆಬ್ ಪೋರ್ಟಲ್ ಆರಂಭಿಸಲಾಗಿದೆ. ಉದ್ಯೋಗದಾತರು ತಮಗೆ ಎಂತಹ ಉದ್ಯೋಗಿಗಳು ಬೇಕು ಎಂಬ ಅರ್ಹತೆಯ ವಿವರಗಳ ಜತೆ ನೋಂದಣಿ ಮಾಡಿಕೊಳ್ಳಬಹುದು’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಹಾಗೆಯೇ, ಕೆಲಸ ಹುಡುಕುವವರೂ ನೊಂದಣಿ ಮಾಡಿಕೊಳ್ಳಬಹುದು. ಅನುಭವ, ಅರ್ಹತೆ, ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಕ್ಷೇತ್ರಗಳ ಬಗ್ಗೆ ನಮೂದಿಸಬೇಕು. ಇದು ಪ್ರತಿಯೊಂದು ಕ್ಷೇತ್ರಗಳಲ್ಲಿ ಉದ್ಯೋಗ ಅರಸುವವರಿಗೂ ನೆರವಾಗಬಹುದೆಂದು ನಂಬಿದ್ದೇನೆ’ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.

ADVERTISEMENT

ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಪರಿಣಾಮವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ವಾಪಸಾಗಿದ್ದಾರೆ. ಇದೀಗ ಅನ್‌ಲಾಕ್ ಪ್ರಕ್ರಿಯೆ ದೇಶದಾದ್ಯಂತ ಆರಂಭವಾಗಿದ್ದರೂ ಉದ್ಯೋಗದಾತರು ಮತ್ತು ನೌಕರಿ ಹುಡುಕಾಟ ನಡೆಸುವವರ ಸಮಸ್ಯೆಗಳು ಮುಂದುವರಿದಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ದೆಹಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.