ADVERTISEMENT

ತಪ್ಪು ಔಷಧ ನೀಡಿರುವ ಆರೋಪ: ಅರ್ಜಿಯನ್ನು ಆದ್ಯತೆ ಮೇಲೆ ಪರಿಗಣಿಸಿ: ಹೈಕೋರ್ಟ್‌

ಪಿಟಿಐ
Published 26 ಆಗಸ್ಟ್ 2021, 9:13 IST
Last Updated 26 ಆಗಸ್ಟ್ 2021, 9:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಔಷಧ ಅಂಗಡಿಯವರು ಯಾವುದೋ ಉತ್ಪನ್ನಕ್ಕೆ ಒರಲ್‌ ರೀಹೈಡ್ರೇಷನ್ ಸಾಲ್ಟ್‌(ಒಆರ್‌ಎಸ್‌) ಎಂದು ತಪ್ಪಾಗಿ ಲೇಬಲ್‌ ಹಚ್ಚಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆದ್ಯತೆ ಮೇಲೆ ಪರಿಗಣಿಸುವಂತೆ ದೆಹಲಿ ಹೈಕೋರ್ಟ್‌ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ, ಈ ಅರ್ಜಿ ಯನ್ನು ಕಾನೂನು, ನಿಯಮಗಳು ಮತ್ತು ನಿಯಂತ್ರಣ ಹಾಗೂ ಸರ್ಕಾರದ ನೀತಿಯ ಅನ್ವಯ ಇತ್ಯರ್ಥ ಗೊಳಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಪ್ರಕರಣದಲ್ಲಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ಸಹಾಯಕ ಪ್ರಾಧ್ಯಾಪಕಿ ರೂಪಾಸಿಂಗ್‌ ಅರ್ಜಿದಾರರಾಗಿದ್ದಾರೆ. ಇವರು ಸ್ಥಳೀಯ ಔಷಧದ ಅಂಗಡಿಯೊಂದರಲ್ಲಿ ಒಆರ್‌ಎಸ್‌ ಖರೀದಿಸಿದ್ದಾಗಿ, ಅಂಗಡಿಯವರು ಒಆರ್‌ಎಸ್‌ ಬದಲಿಗೆ, ಒಆರ್‌ಎಸ್‌ ಲಿಕ್ವಿಡ್‌ (ಒಆರ್‌ಎಸ್‌ಎಲ್‌) ಔಷಧ ನೀಡಿದ್ದರು. ಇದನ್ನು ಬಳಸಿದ ನಂತರ ಮಗುವಿನ ಆರೋಗ್ಯ ಹದಗೆಟ್ಟಿತ್ತು ಎಂದು ರೂಪಾಸಿಂಗ್‌ ಅರ್ಜಿಯಲ್ಲಿ ತಿಳಿಸಿದ್ದಾರೆ.

ADVERTISEMENT

ನಂತರ, ರೂಪಾಸಿಂಗ್ ಅವರು ಮಕ್ಕಳ ವೈದ್ಯರನ್ನು ಸಂಪರ್ಕಿಸಿದರು. ಮಗು ಮತ್ತು ಔಷಧವನ್ನು ಪರಿಶೀಲಿಸಿದ ವೈದ್ಯರು, ‘ನೀವು ಮಗುವಿಗೆ ಕೊಟ್ಟಿರುವುದು ಒಆರ್‌ಎಸ್‌ ಅಲ್ಲ, ಅದು ಒಆರ್‌ಎಸ್‌ಎಲ್. ಈ ಔಷಧದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಸಂಯೋಜನೆ (ಕಾಂಪೋಸಿಷನ್‌) ಇಲ್ಲ‘ ಎಂದು ವಿವರಿಸಿದರು. ಈ ಎಲ್ಲ ವಿವರಗಳನ್ನು ರೂಪಾಸಿಂಗ್‌ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆದ್ಯತೆಯ ಮೇಲೆ ಪರಿಗಣಿಸಿ, ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.