ADVERTISEMENT

ದ್ವೇಷ ಭಾಷಣ ಕಡಿವಾಣಕ್ಕೆ ಎಲ್ಲ ಹಂತದಲ್ಲಿ ಪರಿಣಾಮಕಾರಿ ವ್ಯವಸ್ಥೆ ಅಗತ್ಯ: ಕೋರ್ಟ್

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 14:40 IST
Last Updated 13 ಜೂನ್ 2022, 14:40 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ದ್ವೇಷ ಭಾಷಣಕ್ಕೆ ಕಡಿವಾಣ ಹಾಕಲು ಎಲ್ಲ ಹಂತದಲ್ಲಿಯೂ ಪರಿಣಾಮಕಾರಿ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿತು.

ನಿರ್ದಿಷ್ಟ ಸಮುದಾಯವನ್ನು ಉದ್ದೇಶಿಸಿ ದ್ವೇಷ ಕಾರುವವರದು ತಾರತಮ್ಯ ಮನಸ್ಥಿತಿಯಷ್ಟೇ ಅಲ್ಲ. ಬಹಿಷ್ಕಾರ, ಹತ್ಯಾಕಾಂಡದ ಮನಸ್ಥಿತಿಗೆ ಸಮಾನವಾದುದು. ಹಾಲಿ ಇರುವ ಶಾಸನಬದ್ಧ ನಿಯಮಗಳು ಹಾಗೂ ದಂಡ ಸಂಹಿತೆಯಲ್ಲಿರುವ ಅಂಶಗಳು ಈ ಪಿಡುಗು ಹತ್ತಿಕ್ಕಲು ಹಾಗೂ ನಾಗರಿಕ ಸಮಾಜಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ದ್ವೇಷ ಭಾಷಣ ಕುರಿತಂತೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮತ್ತು ಸಂಸದ ಪ್ರವೇಶ್ ವರ್ಮಾ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶನ ಕೋರಿ ಸಿಪಿಐ (ಎಂ) ಮುಖಂಡರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಇದೇ ಸಂದರ್ಭದಲ್ಲಿ ವಜಾ ಮಾಡಿತು.

ADVERTISEMENT

ಈ ಸಂಬಂಧ ನಿರ್ದೇಶನ ನೀಡಲು ನಿರಾಕರಿಸಿದ್ದ ಕೆಳಹಂತದ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಿಪಿಐ (ಎಂ) ಮುಖಂಡರಾದ ಬೃಂದಾ ಕಾರಟ್‌ ಮತ್ತು ಕೆ.ಎಂ.ತಿವಾರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಜಾ ಮಾಡಿದ ನ್ಯಾಯಮೂರ್ತಿ ಚಂದ್ರಧರಿ ಸಿಂಗ್‌ ಅವರು, ‘ಕೆಳಹಂತದ ಆದೇಶ ಕುರಿತಂತೆ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ವಾಸ್ತವಾಂಶ ಆಧರಿಸಿ ಮೊಕದ್ದಮೆ ದಾಖಲಿಸಲು ಅನುಮತಿಯನ್ನು ಸಕ್ಷಮ ಪ್ರಾಧಿಕಾರದಿಂದಲೇ ಪಡೆಯಬೇಕು’ ಎಂದು ಸ್ಪಷ್ಟಪಡಿಸಿದರು.

ಮಾರ್ಚ್ 25ರಂದು ಈ ಪ್ರಕರಣದ ತೀರ್ಪು ಕಾಯ್ದಿರಿಸಲಾಗಿತ್ತು. ದೆಹಲಿ ಪೊಲೀಸರು ಈ ಕುರಿತು ಪ್ರಾಥಮಿಕ ತನಿಖೆ ನಡೆಸಿ, ಮೇಲ್ನೋಟಕ್ಕೆ ಅಂತಹ ಲೋಪವಾಗಿಲ್ಲ ಎಂದು ಗೊತ್ತಾಗಿದೆ ಎಂದು ಕೆಳಹಂತದ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ ಎಂದೂ ಉಲ್ಲೇಖಿಸಿದರು.

ದ್ವೇಷ ಭಾಷಣವು ನಿರ್ದಿಷ್ಟ ಸಮುದಾಯದ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುತ್ತದೆ. ಇನ್ನೊಂದೆಡೆ ಆ ಸಮುದಾಯದ ಸದಸ್ಯರಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುತ್ತವೆ. ಮಾನಸಿಕವಾಗಿ ಪರಿಣಾಮ ಬೀರಲಿದ್ದು, ಭಯದ ಭಾವನೆಯನ್ನು ಮೂಡಿಸಲಿವೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.