ADVERTISEMENT

ಯೆಸ್ ಬ್ಯಾಂಕ್; ರಾಣಾಗೆ ಮುಂಬೈ ಪಿಎಂಎಲ್‌ಎ ಕೋರ್ಟ್‌ನಲ್ಲಿ ಜಾಮೀನು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 16:16 IST
Last Updated 16 ಫೆಬ್ರುವರಿ 2022, 16:16 IST
ರಾಣಾ ಕಪೂರ್‌
ರಾಣಾ ಕಪೂರ್‌   

ಮುಂಬೈ: ದೆಹಲಿಯ ಪ್ರಮುಖ ಸ್ಥಳದಲ್ಲಿನ ಆಸ್ತಿ ಮಾರಾಟ ಸಂಬಂಧದ ಪ್ರಕರಣದಲ್ಲಿ ಯೆಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌, ಉದ್ಯಮಿ ಗೌತಮ್‌ ಥಾಪ‍ರ್‌ ಸೇರಿ ಏಳು ಮಂದಿಗೆ ಇಲ್ಲಿನ ವಿಶೇಷ ಪಿಎಂಎಲ್ಎ ಕೋರ್ಟ್‌ ಬುಧವಾರ ಜಾಮೀನು ನೀಡಿದೆ.

ಕಪೂರ್ ಮತ್ತು ಥಾಪರ್, ಇತರ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅವರಿಗೆ ಸದ್ಯ ಜೈಲಿನಿಂದ ಬಿಡುಗಡೆ ಇಲ್ಲ. ಪ್ರಸ್ತುತ ಪ್ರಕರಣವು ದೆಹಲಿಯ ಅಮೃತಾ ಶೆರ್ಗಿಲ್ ಮಾರ್ಗ್‌ನಲ್ಲಿರುವ ಆಸ್ತಿಯನ್ನು ಕಪೂರ್‌ ಅವರ ಪತ್ನಿ ಬಿಂದು ಕಪೂರ್‌ ಒಡೆತನದ ಕಂಪನಿಗೆ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದೆ.ಕಳೆದ ವರ್ಷ ಮುಂಬೈನಲ್ಲಿ ಸಿಬಿಐ ಈ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಿತ್ತು.

ಸಿಬಿಐನ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ (ಇ.ಡಿ) ರಾಣಾ ಕಪೂರ್, ಬಿಂದು ಕಪೂರ್, ಗೌತಮ್ ಥಾಪರ್ ಮತ್ತು ಇತರ ಏಳು ಜನರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

ADVERTISEMENT

ಇ.ಡಿ ನಿಲುವು ಕೇಳಿದ ದೆಹಲಿ ಹೈಕೋರ್ಟ್‌

ನವದೆಹಲಿ(ಪಿಟಿಐ): ಹಣ ಅಕ್ರಮ ವರ್ಗಾವಣೆಯಿಂದ ಯೆಸ್ ಬ್ಯಾಂಕಿಗೆ ₹ 466.51 ಕೋಟಿ ನಷ್ಟ ಉಂಟು ಮಾಡಿದ ಆರೋ‍‍ಪ ಎದುರಿಸುತ್ತಿರುವ ಯೆಸ್‌ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಣಾ ಕಪೂರ್‌ ಸಲ್ಲಿಸಿರುವ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯದ(ಇ.ಡಿ) ನಿಲುವು ತಿಳಿಸಲು ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.

ನ್ಯಾಯಮೂರ್ತಿ ಮನೋಜ್‌ ಕುಮಾರ್‌ ಒಹ್ರಿ ಅವರು, ಕಪೂರ್‌ ಸಲ್ಲಿಸಿರುವ ಜಾಮೀನು ಅರ್ಜಿ ಸಂಬಂಧ ಇ.ಡಿಗೆ ನೋಟಿಸ್‌ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಮಾರ್ಚ್‌ 11ಕ್ಕೆ ನಿಗದಿಪಡಿಸಿದ್ದಾರೆ.

ಕಪೂರ್‌ ವಿರುದ್ಧದ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ ಎಂದು ಗಮನಿಸಿರುವ ವಿಚಾರಣಾ ನ್ಯಾಯಾಲಯವುಕಳೆದ ತಿಂಗಳು ಜಾಮೀನು ನೀಡಲು ನಿರಾಕರಿಸಿತ್ತು. ಈ ಪ್ರಕರಣದಲ್ಲಿ ಇತರ 15 ಮಂದಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿದೆ.

ಇ.ಡಿ ಸಲ್ಲಿಸಿದ ಚಾರ್ಜ್ ಶೀಟ್ ಅನ್ನು ಪರಿಗಣಿಸಿದ ನ್ಯಾಯಾಲಯವು ಸಮನ್ಸ್ ನೀಡಿದ ನಂತರ ಕಪೂರ್ ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.