ADVERTISEMENT

ಕೋರ್ಟ್ ವಿಚಾರಣೆ ವೇಳೆ ಮದ್ಯಪಾನ, ಧೂಮಪಾನ ಮಾಡಿದ್ದ ಕಳ್ಳತನದ ಆರೋಪಿ ಬಂಧನ!

ಪಿಟಿಐ
Published 4 ಅಕ್ಟೋಬರ್ 2025, 11:30 IST
Last Updated 4 ಅಕ್ಟೋಬರ್ 2025, 11:30 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ನವದೆಹಲಿ: ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದ ವೇಳೆ ಒಳ ಉಡುಪುಗಳಲ್ಲಿ ಕಾಣಿಸಿಕೊಂಡು ಧೂಮಪಾನ ಮತ್ತು ಮದ್ಯಪಾನ ಮಾಡುವ ಮೂಲಕ ಅಸಭ್ಯ ವರ್ತನೆ ತೋರಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಗೋಕುಲಪುರಿಯ 32 ವರ್ಷದ ಎಂ.ಡಿ.ಇಮ್ರಾನ್ ಬಂಧಿತ ಆರೋಪಿ. ಈತ ದೆಹಲಿಯಾದ್ಯಂತ 50ಕ್ಕೂ ಹೆಚ್ಚು ದರೋಡೆ, ಕಳ್ಳತನ ಮತ್ತು ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್ 22ರಂದು ಕೋರ್ಟ್‌ ಕಲಾಪದ ದಾಖಲೆ ವಿಭಾಗದ ಸಿಬ್ಬಂದಿ ಅನ್ಶುಲ್ ಸಿಂಘಾಲ್ ಅವರು ತೀಸ್‌ ಹಜಾರಿ ನ್ಯಾಯಾಲಯಕ್ಕೆ ನೀಡಿದ ದೂರಿನ ಮೇಲೆ ಇಮ್ರಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಅವರು ಹೇಳಿದ್ದಾರೆ.

ADVERTISEMENT

‘ಸೆಪ್ಟೆಂಬರ್ 16 ಮತ್ತು 17ರಂದು ಅಪರಿಚಿತ ವ್ಯಕ್ತಿಯೊಬ್ಬ ‘ಅಕಿಬ್ ಅಖ್ಲಕ್’ ಎಂಬ ಹೆಸರನ್ನು ಬಳಸಿಕೊಂಡು ನ್ಯಾಯಾಲಯದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಕೇವಲ ಒಳ ಉಡುಪುಗಳನ್ನು ಧರಿಸಿದ್ದ ಆತ ಧೂಮಪಾನ ಮತ್ತು ಮದ್ಯ ಸೇವಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ರಾಜಾ ಬಂಥಿಯಾ ಹೇಳಿದ್ದಾರೆ.

‘ವಿಡಿಯೊ ಕಾನ್ಫರೆನ್ಸ್‌ನಿಂದ ಹೊರ ಹೋಗುವಂತೆ ಪದೇ ಪದೇ ಹೇಳಿದರೂ ಆತ ಹಾಗೆಯೇ ಇದ್ದ. ಇದರಿಂದಾಗಿ ವಿಚಾರಣೆಗೆ ಅಡ್ಡಿ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ’ ಎಂದು ರಾಜಾ ಮಾಹಿತಿ ನೀಡಿದ್ದಾರೆ.

‘ಐಪಿ ವಿಳಾಸ ಮತ್ತು ದೂರವಾಣಿ ಕರೆಗಳ ಪರಿಶೀಲನೆ ವೇಳೆ ಆರೋಪಿ ನಕಲಿ ಇ–ಮೇಲ್ ಐಡಿಗಳನ್ನು ಬಳಸಿರುವುದು ಮತ್ತು ಆಗಾಗ್ಗೆ ಸ್ಥಳ ಬದಲಾಯಿಸುತ್ತಿದ್ದ ವಿಚಾರ ತಿಳಿದುಬಂದಿದೆ. ಗುಪ್ತಚರ ಮತ್ತು ಸ್ಥಳೀಯ ಪೊಲೀಸರ ನೆರವಿನಿಂದ ಓಲ್ಡ್ ಮುಸ್ತಾಬಾದ್‌ನ ಚಮನ್ ಪಾರ್ಕ್‌ನಲ್ಲಿರುವ ನಿವಾಸದಲ್ಲಿ ಇಮ್ರಾನ್‌ನನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುತೂಹಲಕ್ಕಾಗಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದೆ. ಈ ವೇಳೆ ನಾನು ಕೇವಲ ಒಳ ಉಡುಪುಗಳನ್ನು ಮಾತ್ರ ಧರಿಸಿದ್ದೆ. ಜತೆಗೆ, ಸಿಗರೇಟ್ ಸೇದಿದ್ದೆ ಮತ್ತು ಮದ್ಯ ಸೇವಿಸಿದ್ದೆ ಎಂದು ಇಮ್ರಾನ್‌ ತಪ್ಪೊಪ್ಪಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.