ADVERTISEMENT

‘ಸ್ಥಾನ ಹಂಚಿಕೆ: ವರಿಷ್ಠರಿಂದ ಸೌಹಾರ್ದ ತೀರ್ಮಾನ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 20:15 IST
Last Updated 1 ಜನವರಿ 2019, 20:15 IST
   

ನವದೆಹಲಿ: ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸ್ಥಾನ ಹಂಚಿಕೆ ಪ್ರಕ್ರಿಯೆಯನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಎಚ್‌.ಡಿ. ದೇವೇಗೌಡ ಸೌಹಾರ್ದದಿಂದ ನಿರ್ವಹಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ತಿಳಿಸಿದರು.

ಮಂಗಳವಾರ ಇಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈತ್ರಿ ಸರ್ಕಾರದಲ್ಲಿ ಮಿತ್ರ ಪಕ್ಷಗಳು ಸೀಟು ಹಂಚಿಕೆಗಾಗಿ ಬೇಡಿಕೆ ಇರಿಸುವುದು ಸಹಜ. ಅದನ್ನು ಪಕ್ಷದ ವರಿಷ್ಠರು ಯಾವುದೇ ರೀತಿಯ ಗೊಂದಲಗಳಿಗೆ ಎಡೆ ಮಾಡಿಕೊಡದೆ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಕಾಂಗ್ರೆಸ್‌ನ ಶಾಸಕರನ್ನು ತನ್ನತ್ತ ಸೆಳೆಯುತ್ತಿರುವ ಬಿಜೆಪಿಯ ಕ್ರಮವು ಅನೈತಿಕ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ಪಕ್ಷದಿಂದ ಆಯ್ಕೆಯಾದ ಶಾಸಕರು ಪಕ್ಷ ತ್ಯಜಿಸುವುದು ಸುಲಭದ ಮಾತಲ್ಲ. ಆದರೂ ಹಲವು ರೀತಿಯ ಆಮಿಷ ಒಡ್ಡುವ ಮೂಲಕ ಅವರನ್ನು ಸೆಳೆಯುತ್ತಿರುವ ಬೆಳವಣಿಗೆಯನ್ನು ಜನ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಚಾರ ದೊಡ್ಡ ಸವಾಲು:‘ಚುನಾವಣಾ ಪ್ರಚಾರವು ಪೋಸ್ಟರ್‌, ಭಾಷಣ ಮತ್ತು ಮನೆಮನೆ ಪ್ರಚಾರಕ್ಕೆ ಮಾತ್ರ ಈಗ ಸೀಮಿತವಾಗಿರದೆ ವಿಭಿನ್ನವಾಗಿದೆ. ಸಾಮಾಜಿಕ ಜಾಲತಾಣವು ಪ್ರಬಲವಾಗಿರುವ ಈ ದಿನಗಳಲ್ಲಿ ಪ್ರಚಾರಕ್ಕಿಂತ ಅಪಪ್ರಚಾರಕ್ಕೇ ಆದ್ಯತೆ ದೊರೆಯುತ್ತಿದೆ. ಇದು ನಿಜಕ್ಕೂ ದೊಡ್ಡ ಸವಾಲಾಗಿದೆ’ ಎಂದು ಎಚ್‌.ಕೆ. ಪಾಟೀಲ ಹೇಳಿದರು.

ಸಾಮಾಜಿಕ ಜಾಲತಾಣವು ಸಂಪೂರ್ಣವಾಗಿ ಗ್ರಾಮೀಣ ಪ್ರದೇಶಗಳನ್ನು ಪ್ರವೇಶಿಸಿಲ್ಲ. ಆದರೂ ಅಪಪ್ರಚಾರಕ್ಕೆ ಮಹತ್ವ ದೊರೆತಿದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಮೂಲಕ ಲೋಕಸಭೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷವು ನನ್ನ ಅನುಭವ ಮತ್ತು ಮಹತ್ವವನ್ನು ಅರಿತೇ ವರಿಷ್ಠರು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಸಚಿವ ಸ್ಥಾನಕ್ಕಿಂತಲೂ ಉನ್ನತವಾದ ಈ ಸ್ಥಾನದ ಜವಾಬ್ದಾರಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.