ನವದೆಹಲಿ: ಸರ್ಕಾರಿ ಉದ್ಯೋಗದ ನೇಮಕಾತಿ ಪರೀಕ್ಷೆಗೆ ಬಂದ ನಕಲಿ ಅಭ್ಯರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾಷ್ಟ್ರ ರಾಜಧಾನಿಯ ಗ್ರೇಟರ್ ಕೈಲಾಸ್‌ನ ಪರೀಕ್ಷಾ ಕೇಂದ್ರದಲ್ಲಿ ಘಟನೆ ಜರುಗಿದೆ.
ಜವಾಹರ್ ನವೋದಯ ವಿದ್ಯಾಲಯ(ಜೆಎನ್‌ವಿ) ಸಮಿತಿಯ ಅಡಿಯಲ್ಲಿ ಬರುವ ಜೂನಿಯರ್ ಸೆಕ್ರೆಟರಿಯೇಟ್ ಅಟೆಂಡೆಂಟ್ ಹುದ್ದೆಯ ಪರೀಕ್ಷೆಯ ವೇಳೆ ಅಂಕುರ್ ಎಂಬ ಅಭ್ಯರ್ಥಿಯ ಬದಲಿಗೆ ನಕಲಿ ಅಭ್ಯರ್ಥಿಯು ಪರೀಕ್ಷೆಗೆ ಹಾಜರಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಪರೀಕ್ಷೆಯ ವೇಳೆ ಲೋಪ ಹಾಗೂ ನಕಲಿ ಅಭ್ಯರ್ಥಿ ಸುಮಿತ್ ದಹಿಯಾ(29)ಗೆ ಸಹಕಾರ ನೀಡಿದ ಆರೋಪದ ಮೇಲೆ ಶಾಲಾ ಶಿಕ್ಷಕ ಬಿಮಲ್ ಕುಮಾರ್ ಸಿಂಗ್(59), ಕಚೇರಿ ಅಧೀಕ್ಷಕ ಬಲ್ಜೀತ್ ಸಿಂಗ್(50) ಹಾಗೂ 40 ವರ್ಷದ ಒರ್ವ ಮಹಿಳೆಯನ್ನು ಬಂಧಿಸಲಾಗಿದೆ ಎಂದರು.
ವಿಚಾರಣೆಯ ವೇಳೆ, ಅಂಕುರ್ ಬದಲಿಗೆ ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಮಧ್ಯವರ್ತಿಗಳಿಂದ ₹6 ಲಕ್ಷ ಪಡೆದಿರುವುದಾಗಿ ನಕಲಿ ಅಭ್ಯರ್ಥಿ ಸುಮಿತ್ ದಹಿಯಾ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.
ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ಜೊತೆ ನಿಕಟ ಸಂಪರ್ಕವಿದ್ದ ಮಹಿಳೆಯ ಸಹಾಯವನ್ನು ಪಡೆಯಲಾಗಿದೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.